Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ತುಳುನಾಡಿನ ನಾಗ ಪಾತಾಳ ಲೋಕಕ್ಕಿಳಿದ ಕಥೆ-ವ್ಯಥೆ


ವಿದ್ವಾಂಸರ ಪ್ರಕಾರ ನಾಗಾ ಎಂದರೆ ನೀರು. ಕಾಶ್ಮೀರದ ಅನೇಕ ಸರೋವರಗಳು ನಾಗಾ ಹೆಸರಿನಲ್ಲಿದೆ. ತುಳುನಾಡಿನಲ್ಲಿ  ನಾಗ ಬೀದಿ ಎಂದರೆ ಭೂಮಿಯಡಿಯಲ್ಲಿ ನೀರಿನ ಝರಿ ಹರಿಯುವ ಬೀದಿ/ದಾರಿ ಎಂಬರ್ಥವಿದೆ.

 ನಾಗ ಬೆರ್ಮೆರ ಬನ ಇದ್ದಲ್ಲಿ ಬೆರ್ಮೆರೆ ಗುಂಡಿಗಳು, ಬೆರ್ಮೆರೆ ಕೆದುಗಳು, ಸಿರಿಬಾವಿಗಳು ಇವೆ. ಈ ಗುಂಡಿ, ಬಾವಿಗಳಲ್ಲಿ  ನೀರಿನ ಸೆಲೆ ಸದಾ ಜಿನುಗುತ್ತಿರುತ್ತದೆ. ನಾಗ ಬೆರ್ಮೆರ ಈ ಕ್ಷೇತ್ರಗಳಲ್ಲಿ ಕಂಬಲಗಳು ನಡೆಯುತ್ತವೆ. ಈ ಕಂಬಲಗಳು ಹೆಚ್ಚಾಗಿ ‘ಬ್ರಹ್ಮರ’ ಕಂಬುಲ ಎಂದು ಕರೆಸಿಕೊಳ್ಳುತ್ತವೆ. ಅಥವಾ ನಾಗಬೆರ್ಮೆರ ಪರಿವಾರ ದೈವ(ಭೂತ)ಗಳ ಹೆಸರಲ್ಲಿ ನಡೆಯುತ್ತವೆ. ಬೆರ್ಮೆರೆ ಕಂಬುಲ, ಬೆರ್ಮೆರೆ ಬಾಕ್ಯಾರ್ (ಬಾಕಿಮಾರು) ಇತ್ಯಾದಿ ನಾಗ(ಬೆರ್ಮೆರ) ಬನದ ಬಳಿ ಇರುತ್ತವೆ. ಇದು ಸದಾ ನೀರು ಇರುವ ಕ್ಷೇತ್ರಗಳು. ಹೀಗಾಗಿ ಇಲ್ಲಿ ಇರುವ ವಿಶಾಲ ಗದ್ದೆಗಳಲ್ಲಿ ಕಂಬುಲ ನಡೆಯುತ್ತದೆ. ಕಂಬುಲ ಭತ್ತದ ಬೇಸಾಯದ ಪೋಷಕವಾದ ಉಪಾಸನಾ ಆಚರಣೆ. ಹೀಗಾಗಿ ಕಂಬುಲ ಗದ್ದೆಗೂ ಮಡಿ ಇದೆ. ಬಾಕಿಮಾರಿಗೂ ಮಡಿ ಇದೆ. ಕಂಬುಲದ ಕೋಣಗಳಿಗೂ ಮಡಿ ಇದೆ. ಬಕಿಮಾರು ಮತ್ತು ಕಂಬುಲ ಗದ್ದೆಗಳ ಸಾಗುವಳಿಯಲ್ಲಿ ಅಂದರೆ ಕುಯ್ಲು ಮತ್ತು ನಾಟಿಯಲ್ಲಿ ವಿಶೇಷ ಆಚರಣೆಗಳು ಇರುತ್ತವೆ.

ಸಂಪಿಗೆ, ಬಕುಳ, ಸುರಗೆ ಕೇದಗೆ- ಮುಂತಾಂದ ಸುಗಂಧ ಪುಷ್ಪಗಳ ದಟ್ಟ ಕಾಡಿನ ನಡುವೆ ಪೂ ಮಣ್ಣಿನ ಹುತ್ತದಲ್ಲಿ  ಸುಖವಾಗಿ ಇದ್ದ  ನಾಗ-ನಾಗಬ್ರಹ್ಮನ ಬನ ಕಡಿಯಲು ಆರಂಭವಾದಾಗಲೇ ಭತ್ತದ ಬೇಸಾಯ ಅವನತಿಗೆ ಹೋಗುವ ಎಲ್ಲಾ ಸೂಚನೆಯೂ ಇತ್ತು. “ ನಾಗ-ನಾಗ ಬೆರ್ಮರ ಬನದ ಪಾತಾಳಕ್ಕಿಳಿದ ಬೇರನ್ನು ಕಡಿಯಬಾರದು, ಆಕಾಶಕ್ಕೇರಿದ ಚಿಗುರನ್ನು ಚಿವುಟಬಾರದು” ಎಂಬ ನಂಬಿಕೆಯನ್ನು ಕಿರಿಯರ ಒಡಲು ತುಂಬಿಸಿದ್ದರು ಹಿರಿಯರು. ಆದರೆ ಆ ನಂಬಿಕೆಯನ್ನು ಗಾಳಿಯಲ್ಲಿ ಹಾರಿಸಿ ತುಳುನಾಡಿನ ನಾಗಬೆರ್ಮರ ಕುಲದವರು ನಾಗಬೆಮೆರ ಬನವನ್ನು ಕಡಿಸಿ ಕಾಂಕ್ರೀಟ್ ಹಾಕಿಸಿ ನಾಗಬೀದಿಯನ್ನು ಶಾಶ್ವತವಾಗಿ ತಡೆದರು. ನಾಗಬನದ ಕಾಡು ಕಡಿದು ತಾವು ವರ್ಷಕ್ಕೆ ಒಮ್ಮೆ ಬರುವಾಗ ತಮಗೆ ಬಿಸಿಲು ತಾಗದಿರಲಿ, ನಾಗರಪಂಚಮಿಗೆ ಮಳೆಗೆ ತಾವು ನೆನೆಯದಿರಲಿ ಎಂದು ತಗಡಿನ ಚಪ್ಪರ ಹಾಕಿದರು. ನೀರಿನ ಸೆಲೆಗೆ ತಡೆಯೊಡ್ಡಿ ಕಾಂಕ್ರಿಟ್ ಹಾಕಿ, ಹಸಿರು ಚಪ್ಪರ ಕಾಡನ್ನು ಕಡಿದು ತಗಡು ಚಪ್ಪರ ಹಾಕಿ ಪರೂರಿನಿಂದ ಬರುವ ಬಂಧುಗಳಿಗೆ ಅನುಕೂಲಮಾಡಿಕೊಡುವಾಗ ಸರ್ಪಗಳ ಜೀವನಕ್ರಮದ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದ ಮುಗ್ಧರಾದರು ನಮ್ಮವರು.

ಔದ್ಯಮಿಕ ರಂಗ ತುಳುನಾಡಿಗೆ ಪ್ರವೇಶ ಆಗುವ ಮೊದಲೇ ನಾಗಬನಗಳಿಗೆ ಕೊಡಲಿ ಬಿದ್ದುದು ಮುಂಬಯಿಯ ಹಣದ ಪ್ರಭಾವದಿಂದ. ನನ್ನ ಗಮನಕ್ಕೆ ಬಂದಂತೆ 1990ರ ದಶಕಗಳಲ್ಲಿ ಅಲ್ಲೊಂದು ಇಲ್ಲೊಂದರಂತೆ ಆರಂಭವಾದ ನಾಗ ಮಂಡಲ/ಬ್ರಹ್ಮ ಮಂಡಲಗಳು ಮುಂದೆ ಎಲ್ಲಾ ಕುಟುಂಬಗಳವರು ಸಮೂಹ ಸನ್ನಿಗೆ ಒಳಗಾಗಿ ತಮ್ಮ ತಮ್ಮ ನಾಗಬನಗಳನ್ನು ಕಡಿಯಲಾರಂಭಿಸಿದರು. ಪೈಪೋಟಿಗೆ ಬಿದ್ದಂತೆ ನಾಗಮಂಡಲಗಳು ನಡೆಯಿತು. ಇದು ಆರಂಭ ಕಾಲ.

ಮುಂದೆ ಇಲ್ಲಿಗೆ ಬಂದ ಬಹು ರಾಷ್ಟ್ರೀಯ ಉದ್ಯಮಗಳು ಭತ್ತದ ಬೇಸಾಯದ ಫಲವತ್ತಾದ ಭೂಮಿಗೆ ಮಣ್ಣು ಸುರಿದು ಭತ್ತದ ಬೇಸಾಯದ ಅವಸಾನಕ್ಕೆ ಮುನ್ನುಡಿ ಬರೆಯಿತು. ತದ ನಂತರ ಬಹುರಾಷ್ಟ್ರೀಯ ಕಂಪೆನಿಗಳು ಒಂದರ ಹಿಂದೆ ಮತ್ತೊಂದುರಂತೆ ಧಾಳಿಯಿಡತೊಡಗಿತು.

ನಾಗಬನಗಳ  ಪೂಮಣ್ಣಿನ ನೆಲಕ್ಕೆ ಕಾಂಕ್ರೀಟ್ ಬಿದ್ದು ಕಾಡು ಕಡಿದ ಮೇಲೆ ನೀರಿನ ಅಂತರ್ಜಳದ ಒರೆತಕ್ಕೆ ಧಕ್ಕೆಯಾಯಿತು. ನಾಗ ಬೀದಿಗಳು, ನಾಗಬೆರ್ಮೆರ ಗುಂಡಿಗಳು, ಸಿರಿಬಾವಿಗಳಿಗೂ ಮಣ್ಣು ಬಿತ್ತು. ಕಂಬುಲಗಳ, ಬಾಕಿಮಾರು ಗದ್ದೆಗಳ ಮೂಲಕ ಸಾಮೂಹಿಕ ಬೇಸಾಯ ಮಾಡುತ್ತಿದ್ದ ಕ್ರಿಯೆಗಳೂ ನಿಧಾನವಾಗಿ ಮರೆಗೆ ಸರಿಯಿತು. ಉಪಾಸನಾ ಆಚರಣೆಯಾಗಿ ಇದ್ದ ಕಂಬುಲ ಶ್ರೀಮಂತರ ಕ್ರೀಡೆಯಾಗಿ ಪ್ರಾಣಿದಯಾಸಂಘದವರ ಗಮನ ಸೆಳೆಯಿತು. ಹೀಗಾಗಿ ಕಂಬುಲಕ್ಕೆ ನಿಷೇಧ ಬಿತ್ತು.

ಬೇಸಾಯವೇ ಮರೆಗೆ ಸರಿದ ಮೇಲೆ ಬೇಸಾಯಪೋಷಕವಾದ ಕಂಬುಲದಲ್ಲಿ ಸಾಂಪ್ರದಾಯಿಕ ಕಂಬುಲದವರು ಆಸಕ್ತಿ ಕಳಕೊಂಡರು. ಆದರೂ ದೈವದ ಸೇವೆ ಎಂದು ವಿಧಿವಿಧಾನವನ್ನು, ಆಚರಣೆಯನ್ನು ಮಾತರ ಉಳಿಸಿಕೊಂಡರು, ಬೇಸಾಯದ ಕೈ ಬಿಟ್ಟರ್ಲು.
ಭತ್ತದ ಬೇಸಾಯ ನಾಶವಾದಾಗÀ ಅಂತರ್ಜಳ ಕುಸಿಯಿತು. ಗದ್ದೆಗಳ ನಡುವೆ ಸದಾ ಅಂತರ್ಜಲವನ್ನು ಚಿಮ್ಮಿಸುತ್ತಿದ್ದ ಸಹಜ ನೀರಿನ ಬುಗ್ಗೆಗಳ ಬಾವಿಗಳೂ ಆರೈಕೆ ಮಾಡುವವರಿಲ್ಲದೆ ಪಾತಳಕ್ಕಿಳಿಯಿತು ಅಂತರ್ಜಲ.

ಭತ್ತದ ಬೆಳೆ ಭರ್ಜರಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ನೀರಿನ ಸಂಗ್ರಹಣೆಗೆ ರೈತರು ಗಮನ ನೀಡುತ್ತಿದ್ದುರಿಂದ ಸಣ್ಣ ಪುಟ್ಟ ತೊರೆಗಳಿಗೂ, ತೋಡುಗಳಿಗೂ ಅಡ್ಡ ಮಣ್ಣು ಹಾಕಿ ನೀರಿನ ಹರಿವನ್ನು ತಡೆದು ರೈತರು ನೀರನ್ನು ಸಂಗ್ರಹಿಸಿ ಕೊಳ್ಳುತ್ತಿದ್ದರು. ನದಿ ತೊರೆಗಳಿಗೆ ತಾವೇ ಅಡ್ಡಕಟ್ಟ ಕಟ್ಟಿ ಮಳೆ ನೀರು ಹರಿದು ಹೋಗದಂತೆ ವ್ಯವಸ್ಥೆ ಮಾಡುತ್ತಿದ್ದರು. ಮಳೆಗಾಲದ ನೀರು ಗುಡ್ಡದ ತಪ್ಪಲಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲ ಮನೆ ಮುಂದೆ ಸಣ್ಣ ತೋಡು ಹರಿಯುತ್ತಿದ್ದರೂ ಆ ನೀರಿಗೂ ಅಡ್ಡ ಹಾಕಿ ತಡೆದು ನೀರು ಪೋಲಾಗದಂತೆ ಜಾಗ್ರತೆವಹಿಸುತ್ತಿದ್ದರು. ಇಂತಹ ತೋಡುಗಳಲ್ಲಿ ಓಡಾಟಕ್ಕೆ ‘ಪಾಪು’ ಹಾಕುತ್ತಿದ್ದರು.

ಹಿಗಾಗಿ ಎಣೆಲ್, ಸುಗ್ಗಿ, ಕೊಳಕೆ ಬೆಳೆಗಳು ಬೆಳೆಯುವಾಗ ಭೂಮಿಯು ನೀರಿನಿಂದ ಸಮೃದ್ಧವಾಗಿರುತ್ತಿತ್ತು. ವರ್ಷಕ್ಕೆ ಕನಿಷ್ಟ ಮೂರು ಬೆಳೆ ತೆಗೆಯುತ್ತಿದ್ದರು. ಏತ ನೀರಾವರಿಯ ಮೂಲಕ ಗದ್ದೆಗಳಿಗೆ, ತೋಟಕ್ಕೆ, ನೀರು ಹಾಯಿಸಲಾಗುತ್ತಿತ್ತು. ಹೀಗಾಗಿ ಬೇಸಗೆಯ ಕಾಲದಲ್ಲೂ ಬೈಲು ಭೂಮಿಯಲ್ಲಿ ಹಸಿರು ಕಾಣುತ್ತಿತ್ತು. ಮುಂದೆ ಮೊಬೈಲ್ ಪಂಪ್ (ಸೀಮೆ ಎಣ್ಣೆಯ ಪಂಪ್) ಬಂದ ಮೇಲೆ  ಕೊಳಕೆ ಬೆಳೆಯುವುದು ಹೆಚ್ಚಾಯಿತು.

ತುಳುನಾಡು ರಾಜಕೀಯವಾಗಿ ಕರ್ನಾಟಕಾಂತರ್ಗತ ರಾಜ್ಯವಾಗಿದ್ದರೂ ಸಾಂಸ್ಕøತಿಕವಾಗಿ ಮತ್ತು ಸಾಮಾಜಿಕವಾಗಿ ಅದು ಸ್ವತಂತ್ರ ರಾಜ್ಯ. ಹೀಗಾಗಿ ಕರ್ನಾಟಕದ ಒಳಗಿದ್ದರೂ ತುಳುನಾಡಿನ ತುಳುವರು ಸ್ವತ್ತಂತ್ರ ಅಸ್ಮಿತೆಯಲ್ಲಿ ಉಳಿದುಕೊಂಡರು. ಇದರ ಪರಿಣಾಮವಾಗಿ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಯಾವುದೇ ಜಿಲ್ಲೆಗೆ ಇರದ ಕನ್ನಡಿಗರ ವಾರೆ ನೋಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯತ್ತ ಹರಿಯಿತು. ಅದಕ್ಕೆ ಪೂರಕವಾಗಿ ಅವಿಭಜಿತ ದಕ್ಷಿಣಕನ್ನಡ ಅರ್ಥಾತ್ ತುಳುನಾಡಿನ ಭಾಷೆ, ನೆಲ, ಜಲ, ಸಮಾಜ ಪದ್ಧತಿ, ಉಪಾಸನಾ ವೈóಶಿಷ್ಟ್ಯ -ಇದನ್ನು ರಕ್ಷಿಸುವಲ್ಲಿ ತುಳುನಾಡಿನ ಪ್ರತಿನಿಧಿ ರಾಜಕಾರಣಿಗಳು ಪ್ರಯತ್ನ ಪಡಲಿಲ್ಲ. ಹೀಗಾಗಿ ಫಲವತ್ತಾದ ಭೂಮಿಯಾಗಿ ಭತ್ತದ ಕಣಜವಾಗಿದ್ದ ತುಳುನಾಡು ಈಗ ಬೆಂಗಾಡು ಆಗಿದೆ. ನಾಗ/ಬೆರ್ಮರ ಬನಗಳನ್ನು ಕಾಡುಗಳನ್ನು ಕಡಿದು ಭೂಮಿಗೆ ಕಾಂಕ್ರಿಟ್ ಹಾಕಿ, ಬಾನಿಗೆ ಶೀಟ್ ಹಾಕಿ ನೆಲ ಜಲದ ನಾಶಕ್ಕೆ ಮುನ್ನುಡಿ ಬರೆಯುತ್ತಿದ್ದ ದಿನಗಳಲ್ಲಿ ನಾನೊಂದು ಕವನ ಬರೆದಿದ್ದೆ. “ ಉಂದು ಏರ್ ಮಲ್ತಿ ಪಾಪ! ಏರೆ ತಟ್ಟು ಶಾಪ” ಎಂದು. ಹೌದು ಇಂದು ತಟ್ಟುತ್ತಿದೆ ಶಾಪ! ನಾವು ಹಿರಿಯರು ನಾಗಬೆರ್ಮೆರ ಬನ ಕಡಿದು ನೀರಿನ ಒರೆತ ತಡೆದ ಪಾಪ ನಮ್ಮ ಪೀಳಿಗೆಗೆ ಶಾಪವಾಗಿ ತಟ್ಟುತ್ತಿದೆ. ನಾಗ ಬೀದಿ/ನಾಗ ನಡೆ ಪಾತಳಕ್ಕೆ ಇಳಿದಿದೆ. ಬೇಸಾಯ ನೇಪಥ್ಯಕ್ಕೆ ಸರಿದು ಹಳ್ಳಿಗಳು ಸುಡುಗಾಡಿನಂತಾಗುತ್ತಿವೆ. ತುಳುನಾಡಿನ ಹಳ್ಳಿಗಳಲ್ಲಿ ಕುಡಿಯಲೂ ನೀರಿಲ್ಲ. ಪೇಟೆಯವರಿಗೆ ನದಿನೀರು ಸರಬರಾಜು ಆಗುತ್ತದೆ. ಇಲ್ಲವೇ ಟ್ಯಾಂಕರ್ ನೀರು ಬರುತ್ತದೆ. ಆದರೆ ಹಳ್ಳಿಯವರಿಗೆ ಕುಡಿಯುವ ನೀರಿಗೆ ಬರ ಬಂದಿದೆ.

✍ ಡಾ. ಇಂದಿರಾ ಹೆಗ್ಗಡೆ
Share on :

SUDDI

 

Copyright © 2011 Tuluworld - All Rights Reserved