Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಹಾದಿ ತಪ್ಪುತಿದೆ ತುಳುನಾಡಿನ ನಾಗಾರಾಧನೆ


           ತುಳುನಾಡಿನ ಪಾರ್ದನ ಅಥವಾ ಜಾನಪದ ಕಥೆಗಳ ಪ್ರಕಾರ ತುಳುವರ ಮೂಲ ದೈವ ಬಿರ್ಮ ದೇವರೆಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ತುಳುವ ಸಂಸ್ಕೃತಿಯ ಪ್ರಕಾರ ಬಿರ್ಮ ಅನ್ನುವ ಶಕ್ತಿ ಭೂಮಿ ಉಂಡಾದಾಗ ಸೃಷ್ಟಿಯಾದ ದೈವ. ಹಿರಿತನದ ನೆಲೆಯಲ್ಲಿ ಬಿರ್ಮ ದೈವವಾದರೂ ದೇವಭಾಗವನ್ನು ನೀಡಿ ವೈಭೋಗದಿಂದ ದೇವರಾಗಿ ಕಂಡವರು ತುಳುವರು. ದೇವರು ಅನ್ನುವ ಯಾವುದೇ ಕಥೆಯಾಗಲಿ, ಆಯ ಆಕಾರಗಳಾಗಲಿ ತುಳುವರ ಬಿರ್ಮದೇವರಿಗಿರಲಿಲ್ಲ. ಮೂಲದಲ್ಲಿ ಬನದ ಪ್ರಧಾನ ದೈವ ಬಿರ್ಮನಾದರೆ ನಾಗ ಮತ್ತು ಲೆಕ್ಕೆಸಿರಿ ದೈವಗಳು ಉಪದೇವತೆಗಳಾಗಿದ್ದವು. ಹಿಂದೆ ಗುತ್ತು ಬಾಳಿಕೆಗಳಲ್ಲಿ ರಾಜನ್ ದೈವವನ್ನು ನಂಬುವುದಿದ್ದರೆ ಆ ಮನೆಯಲ್ಲಿ ಬನವಿರಬೇಕು ಅನ್ನುವ ನಿಯಮಗಳಿದ್ದವು. ದೈವಗಳಿಗೆ ಬಲಭಾಗದಲ್ಲಿ ನಿಂತು ಬಲ ನೀಡುವ ಬಿರ್ಮ ದೇವರಿಗೆ ಮೊದಲ ತಂಬಿಲ ನಡೆಯುವುದು ರೂಢಿಯಲ್ಲಿತ್ತು. ನಾಗಬನಕ್ಕೆ ಹೊಂದಿಕೊಂಡು ಅದಕ್ಕೆ ಸಂಬಂಧಿಸಿದ ಕಂಬಳವಿರುತ್ತಿತ್ತು. ಈ ಕಂಬಳಗಳಿಗೂ ಬಿರ್ಮ ದೇವರಿಗೂ ಹೊಂದಿಕೊಂಡು ಆನೇಕ ಆಚರಣೆ ಮತ್ತು ಸಂಪ್ರದಾಯಗಳು ತುಳುನಾಡಿನಲ್ಲಿದ್ದವು.              ವೈದಿಕತೆಯ ಗಾಳಿ ತುಳುನಾಡನ್ನು ಪ್ರವೇಶಿಸಿಕೊಂಡಂತೆ ತುಳುವರ ರೂಪ ಮತ್ತು ಮೂರ್ತಿಯಿಲ್ಲದ ಬಿರ್ಮ ದೇವರು ಉಪದೈವವಾದ ನಾಗನೊಂದಿಗೆ  ಸೇರಿಸಿ ನಾಗಬ್ರಹ್ಮ ಅನ್ನುವ ಹೊಸ ಹುಟ್ಟಿಗೆ ನಾಂದಿ ಹಾಡುತ್ತದೆ. ಐದು ತಲೆಯ ನಾಗಬ್ರಹ್ಮನೆಂದರೆ ಪುರಾಣ ಪುಟದ ವಾಸುಕಿಯ ಕಲ್ಪನೆಯೇ ಹೊರತು ತುಳುನಾಡಿನ ನಾಗನಿಗೂ ಈ ನಾಗಬ್ರಹ್ಮನಿಗೂ ತುಂಬಾ ಅಂತರವಿದೆ. ಇಲ್ಲಿ ಮೂರ್ತಿ ಪೂಜಕರಲ್ಲದ ತುಳುವರಿಗೆ ಬರಿಯ ಮೂರ್ತಿ ಬಂದಿದ್ದಲ್ಲ. ಮೂರ್ತಿಪೂಜೆಯ ಅಂಗವಾಗಿ ಷೊಢಶ ಸಂಸ್ಕಾರ ಮಾಡಿ ನಾಗದೇವರಿಗೆ ಜನಿವಾರ ತೊಡಿಸಿ ಮಡೆಮೈಲಿಗೆಯ ಆಚರಣೆಗಳು ಪ್ರಾರಂಭವಾದವು. ಮೂರ್ತಿ ಪೂಜೆಯ ಅಂಗವಾದ ಅಭಿಷೇಕವನ್ನು ತನು ಎರೆಯುವುದು ಕೂಡ ತಂಬಿಲದ ಅಂಗವಾಯಿತು.ಪುರಾಣದ ಕಥೆಯೇ ಪ್ರಧಾನವಾಗಿ, ಆರತಿ ಮಂತ್ರದ ಜಾಗಂಟೆಗಳ ಸದ್ದಿಗೆ ತುಳುವರರು ತಲೆಯಾಡಿಸಿದರು. ಸಂಕ್ರಾಂತಿ ಶ್ರೇಷ್ಠವಾಗಿದ್ದ ತುಳುವರಿಗೆ, ಪಂಚಮಿ, ಷಷ್ಠಿಗಳು ಮೇಲಾದವು.ಮೃತ್ತಿಕ ಪ್ರಸಾದದ ಬದಲಿಗೆ ಅರಷಿಣ ಗಂಧಗಳಿಗೆ ಒಗ್ಗಿಕೊಂಡುರು.ತಮಗರಿವಿಲ್ಲದಂತೆ ತುಳುವರ ಬಿರ್ಮ ದೇವರು ಬನದಿಂದ ಹೊರಬಿದ್ದು ಬಿಕಾರಿಯಾದ ಕಥೆ ಪುರಾಣದ ಕಥೆಯ ಮುಂದೆ ತಿಳಿಯಲೇ ಇಲ್ಲ  ಮುಂದೆ ಜೈನಧರ್ಮ ತುಳುನಾಡಿಗೆ ಅಡಿಯಿಟ್ಟಾಗ, ನಾದಬ್ರಹ್ಮ, ಯಕ್ಷಬ್ರಹ್ಮ, ಯೋಧಬ್ರಹ್ಮ, ನಾಗಯಕ್ಷಿ, ನಾಗನಂದಿ ನಾಗಕನ್ನಿಕೆ ಮೊದಲಾದ ಹೊಸ ಹೊಸ ಕಲ್ಪನೆಯ ಮೂರ್ತಿಗಳ ಆರಾಧನೆ ಜನ್ಮಪಡೆಯುತ್ತವೆ. ಹೀಗೆ ಮೂರ್ತಿಯೇ ಇಲ್ಲದ ತುಳುವರ ಭಕ್ತಿಯ ಪ್ರತೀಕ ಮೂರ್ತಿ ರೂಪ ಪಡೆದುಕೊಳ್ಳುತ್ತದೆ. ಬರಿಯ ಮೂರ್ತಿ ರೂಪ ಪಡೆದಿದ್ದರೆ ಸಹಿಸಿಕೊಂಡು ಸುಮ್ಮನೆ ಇರಬಹುದಿತ್ತು. ಆದರೆ ಮೂರ್ತಿ ಪೂಜೆ ಆದರ ಹುಟ್ಟಿಗೆ ಅನುಗುಣವಾಗಿ ಗುಂಡ ಬೇಡಿಕೊಂಡಿತ್ತು. ಅದರೆ ಇದು ಬರೀ ಗುಂಡ ಕಟ್ಟುವ ವಿಚಾರವಾಗಿ ಉಳಿಯಲಿಲ್ಲ. ಸಮೃದ್ಧವಾಗಿದ್ದ ನಾಗಬನಗಳು ಧರಶಾಯಿಯಾಗಿ ಇನ್ನಿಲ್ಲದಂತೆ ಮಲಗಿದವು. ಕಂಬಳಗದ್ದೆಗಳು ಅಡಿಕೆ ತೋಟಗಳಾದವು. ಕಂಬಳ ಅನ್ನುವ ಸಾಂಪ್ರದಾಯಿಕ ಸಾಗುವಳಿಯ ಆಟ ಉಳ್ಳವರ ಮೋಜಿನ ಕ್ರೀಡೆಯಾಯಿತು. ತುಳುವರ ಕಾಡ್ಯನಾಟ ಕೆಲವೊಂದು ಜನರ ಜೋಳಿಗೆಯ ತುತ್ತಿನ ಸ್ವತ್ತಾಯಿತು. ಬಿರ್ಮ ದೈವವಿಲ್ಲದೇ ತುಳುನಾಡಿನ ಜನತೆ ನಿಜವಾದ ಬಡವಾರಾದರು.                           ✍🏻 *ಚಂದ್ರಕಾಂತ ಶೆಟ್ಟಿ ಕಾರಿಂಜ*
Share on :

SUDDI

 

Copyright © 2011 Tuluworld - All Rights Reserved