Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ತುಳುನಾಡಿಗೆ “ಉಳ್ಳಾಲ್ತಿ ದೈವ” ಹೀಗೆ ಬಂದಳು


ಪ್ರತಿಯೊಂದು ದೈವದ ಆಗಮನದ ಹಿಂದೆ ಒಂದೊಂದು ರೋಚಕ ಕಥೆ ಇದೆ. ಹಾಗೆ ಉಳ್ಳಾಲ್ತಿ ಪಾಡ್ದನದ ಪ್ರಕಾರ ಉಳ್ಳಾಲ್ತಿ ತುಳುನಾಡಿಗೆ ಆಗಮನವಾದದ್ದು ಪಶ್ಚಿಮ ಘಟ್ಟಗಳ ಕಡತ್ತಿಕಲ್ ಘಾಟಿಯ ಮಾರ್ಗವಾಗಿ ಎಂದು ತಿಳಿದು ಬರುತ್ತದೆ. ಈ ಕಥೆಯನ್ನು ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್
ತದೆ. ಗಂಗನಾಡು ಕೊಂಗ ದೇಶದ ಬಂಗಾರದ ಅರಮನೆಯಲ್ಲಿ ಉಳ್ಳಾಯ ಮತ್ತು ಉಳ್ಳಾಲ್ತಿ ದೈವಗಳು ತೂಗುಮಂಚದಲ್ಲಿ ಉದಿಸಿದ್ದರು. ಹೀಗೆ ಉದಿಸಿದ ಅಣ್ಣ ತಂಗಿ ದೈವಗಳು ಊರಿಗೆ ಸತ್ಯದ ಸಂದೇಶ ಬಿತ್ತರಿಸುತ್ತಿದ್ದ ಸಂದರ್ಭದಲ್ಲಿ ಏಳು ಜನ ಮಹಿಳೆಯರು ಈ ದೈವಗಳಿಗೆ ಅಪವಾದ ಹೇಳಿದರೆಂದು ಅಧರ್ಮದ ನಾಡಿನಿಂದ ಘಟ್ಟ ಇಳಿದು ಉರ್ಕಿನಾಡು, ದಂಬೆಅಂಗಡಿ, ಕಡತಿಕಲ್ಲು, ಜಂಗಮಕೆರೆ ದಾಟಿ ಧರ್ಮದ ನಸುಬೆಳಕು ಕಾಣುವ ಬಂಗದ ಸೀಮೆಗೆ ಬಂದು ಕಿಲ್ಲೂರಿನ ಕೊಲ್ಲಿದುರ್ಗೆಯನ್ನು ಸಂದರ್ಶಿಸಿದರು. ಅಲ್ಲಿಂದ ಜೈನ ಶ್ರವಣರ ತಪಸ್ಸಿನ ತಾಣ ಶ್ರವಣಗುಂಡಕ್ಕೆ ಬಂದು ಅಲ್ಲಿಂದ ಮಾಸ್ತಿಕಲ್ಲು ದಾಟಿ, ಮಾರಣ ಭೂಮಿಯಾಗಿ ಬಂಗವಾಡಿ ಅರಮನೆಯ ಬಳಿ ಬಂದು ಅರಮನೆಯ ಆನೆಗೆ ಹುಚ್ಚು ಹಿಡಿಸುವ ಮೂಲಕ ಉಳ್ಳಾಲ್ತಿ ತನ್ನ ಸಾನ್ನಿಧ್ಯವನ್ನು ಪ್ರಕಟಪಡಿಸಿದ್ದಾಳೆ ಎಂದು ಪಾಡ್ದನದಿಂದ ತಿಳಿದುಬರುತ್ತದೆ. ಇದೇ ಸಂದರ್ಭದಲ್ಲಿ ಬಂಗವಾಡಿಯ ಬಂಗರಾಜನು ಶಾಂತೇಶ್ವರ ಬಸದಿ ಬಳಿ ಉಳ್ಳಾಲ್ತಿಗೆ ಸ್ಥಾನ ಕಟ್ಟಿ ನಂಬಿಕೊಂಡು ಬಂದನೆಂಬ ಪ್ರತೀತಿ ಇದೆ. ಉಳ್ಳಾಲ್ತಿಯ ಅಣತಿಯಂತೆ ಇಂದಬೆಟ್ಟಿನ ಕುತ್ತೊಟ್ಟು ಎಂಬಲ್ಲಿ ಅವಳಿಗೆ ಮಾಡ ಕಟ್ಟಿಸಿದ ಎಂಬ ನಂಬಿಕೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಬೆಟ್ಟುವಿನಲ್ಲಿ ಉಳ್ಳಾಕುಲು ಮತ್ತು ಮುಡ್ತಿಲ್ಲಾಯ ಗುಡಿಗಳ ನಡುವೆ ಉಳ್ಳಾಲ್ತಿಯ ಮಾಡ (ಸ್ಥಾನ) ಇರುವುದನ್ನು ನಾವು ಇಂದಿಗೂ ಕಾಣಬಹುದಾಗಿದೆ. ಪ್ರಥಮವಾಗಿ ಉಳ್ಳಾಲ್ತಿ ದೈವವು ಬಂಗವಾಡಿಯಲ್ಲಿ ನೆಲೆಯಾಗಿ ನಂತರ ತನ್ನ ಶಕ್ತಿಯ ಮೂಲಕ ಉಳಿದ ಪ್ರದೇಶಗಳ ಯೋಗ್ಯ ಜನರನ್ನು ಕೈಹಿಡಿದು ನೆಲೆಯಾಗುತ್ತಾ ನಂಬಿದವರಿಗೆ ಇಂಬು ನೀಡಿ, ನಂಬದವರಿಗೆ ತನ್ನ ಶಕ್ತಿಯ ಮರ್ಮವನ್ನು ತಿಳಿಯಪಡಿಸುತ್ತಾ ತನ್ನ ಸ್ಥಾನವನ್ನು ಗಟ್ಟಿಗೊಳಿಸಿರುವುದು ಪಾಡ್ದನಗಳಿಂದ ತಿಳಿದುಬರುತ್ತದೆ.
ತುಳುನಾಡಲ್ಲಿ ಉಳ್ಳಾಲ್ತಿಯ ನೆಲೆ:
ದೇವರಿಗಿಂತ ಹೆಚ್ಚಾಗಿ ತುಳುನಾಡು ದೈವಗಳು ಮಾನದಿಗೆ ಪಡೆದಿದೆ. ಇಂತಹ ದೈವಗಳ ಸಾಲಲ್ಲಿ ಸಮಾಜದ ರೀತಿ ರಿವಾಜನ್ನು ಪ್ರಶ್ನಿಸಿ ಸಮಾಜವನ್ನು ಅಭಿವೃದ್ಧಿಪಡಿಸುತ್ತೇನೆ ಎಂದ ಕಾಯ ಬಿಟ್ಟು ಮಾಯ ಸೇರಿ ತುಳುನಾಡಲ್ಲಿ ಮಾನದಿಗೆ ಪಡೆದ ದೈವವೇ ಶ್ರೀ ಉಳ್ಳಾಲ್ತಿ. ಕೇರಳ, ಕಾಸರಗೋಡು ಹಾಗೂ ತುಳುನಾಡಿನಲ್ಲಿ ಯಾವ ರೀತಿಯಲ್ಲಿ ಉಳ್ಳಾಕ್ಲು ದೈವ ಮಾನದಿಗೆ ಪಡೆದಿದೋ ಅದೇ ರೀತಿ ಉಳ್ಳಾಲ್ತಿ ಅಮ್ಮ ಕೂಡ ಬಹಳಷ್ಟು ಮಾನದಿಗೆ ಪಡೆದುಕೊಂಡಿದ್ದಾರೆ. ಉಳ್ಳಾಲ್ತಿ ದೈವ ಬೇರೆ ಬೇರೆ ಶಕ್ತಿಯ ರೂಪದಲ್ಲಿ ತುಳುನಾಡಲ್ಲಿ ಆರಾಧನೆ ಪಡೆಯುತ್ತಿದ್ದಾರೆ. ಕಲ್ಲಡ್ಕದ ಕಾಂಪ್ರಬೈಲು ಉಳ್ಳಾಲ್ತಿಯ ಕಲೆ ಕಾರಣಿಕತೆ ಒಂದು ಕಡೆಯಾದರೆ, ಮಾಣಿ ಮೆಚ್ಚಿಯ ಉಳ್ಳಾಲ್ತಿಯ ಕಾರಣಿಕತೆ ಇನ್ನೊಂದು ಕಡೆಯಾಗಿದೆ. ಬಂಟ್ವಾಳ ತಾಲೂಕನ್ನು ಅವಲೋಕನ ಮಾಡಿದರೆ ಕೇಪು, ಅನಂತಾಡಿ, ಮಾಣಿ ಹೀಗೆ ಬಹಳಷ್ಟು ಉಳ್ಳಾಲ್ತಿ ದೈವಸ್ಥಾನಗಳನ್ನು ಕಾಣಬಹುದು. ಅದೇ ರೀತಿ ಪುತ್ತೂರು ತಾಲೂಕಿನಲ್ಲಿಯೂ ಕೆಲವೊಂದು ಉಳ್ಳಾಲ್ತಿ ದೈವಸ್ಥಾನಗಳಿವೆ. ಅದರಲ್ಲಿ ಪುತ್ತೂರು ಪೇಟೆಯ ಹೃದಯ ಭಾಗಕ್ಕೆ ಹತ್ತಿರವಿರುವ ಮತ್ತು ಹತ್ತೂರು ಜನರು ಭಕ್ತಿಯಿಂದ ಪೂಜಿಸುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಿಕಟ ಸಂಪರ್ಕ ಹೊಂದಿರುವ ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನ ದೈವಸ್ಥಾನ ಹತ್ತೂರ ಜನರನ್ನು ಭಕ್ತಿಯಿಂದ ಕೈ ಬೀಸಿ ಕರೆಯುತ್ತಿದೆ.
ಉಳ್ಳಾಲ್ತಿ ದೈವದ ವೇಷ ಭೂಷಣ:
ಉಳ್ಳಾಲ್ತಿ ಹೆಸರೇ ಸೂಚಿಸುವಂತೆ ಸಾಮಾನ್ಯವಾಗಿ ಸ್ತ್ರೀ ಭೂತದ ಮುಖವರ್ಣಿಕೆಯನ್ನೇ ಉಳ್ಳಾಲ್ತಿ ದೈವದ ಕಟ್ಟಳೆಗೂ ಬಳಸಲಾಗುತ್ತದೆ. ಮುಖವರ್ಣಿಕೆಯ ನಂತರ ಕೆಂಪು ಚಲ್ಲಣ, ಕೆಂಪು ಅಂಗಿ ಧರಿಸಲಾಗುತ್ತದೆ. ಕಾಲಿಗೆ ಕಾರಪಾಲೆ, ಗಗ್ಗರವನ್ನು ಕಟ್ಟಲಾಗುತ್ತದೆ. ಹಣೆಗೆ ಹಣೆಪಟ್ಟಿ, ತಲೆಗೆ ತಲೆಮಣಿ, ತಲೆಪಟ್ಟ, ತಲೆ ಹೂ, ಕೇದಿಗೆ ಹೂ, ಜಾಲಿಗೊಂಡೆ, ಹೂ ದಂಡೆ, ತಲೆಪುಂಡೈ, ಮುಂದಲೆ ತಿಲಕ, ಮುಂದಲೆ ಹೂ, ಜಡೆ ಹಾಕಲಾಗುತ್ತದೆ. ಅದೇ ರೀತಿ ಕಿವಿಗೆ ಕೆಬಿನ (ಕಿವಿಯಾಕಾರವುಳ್ಳ ಆಭರಣ), ಕೊರಳಿಗೆ ಗುಂಡುಸರ, ಚಕ್ರಸರ, ಕೊತ್ತಂಬರಿ ಸರ, ಪವನಸರ, ಕುರ್ಜಾಪುಸರ, ಕಟ್ಟಾಣಿಸರ ಧರಿಸುತ್ತಾರೆ. ತೋಳಿಗೆ ಕೈಬಳೆ, ತಿರಿಪುಂಡೈ, ಕೇಪುಳು ಹೂವಿನ ದಂಡೆ, ಭುಜಕ್ಕೆ ಭುಜಹಾಳೆ, ಎದೆಗೆ ಎದೆಪಾಳೆ (ಎದೆ ಹಾಳೆ), ತಿಗಲೆ ಸವರಿ (ಎದೆಯ ಮೇಲೆ ಕಟ್ಟಿಕೊಳ್ಳುವ ತೆಂಗಿನ ಗರಿ), ಎದೆ ಪದಕ, ಮಿರೆಕಟ್ (ಸ್ತ್ರೀ ಎಂದು ಸೂಚಿಸಲು ಧರಿಸಿಕೊಳ್ಳುವ ಬೆಳ್ಳಿಯ ಅಥವಾ ಕಂಚಿನಿಂದ ತಯಾರಿಸಿದ ಮೊಲೆಕಟ್ಟು) ಅದೇ ರೀತಿ ಸೊಂಟಕ್ಕೆ ತೆಂಗಿನ ಗರಿ (ತಿರಿ) ಬಳಸದ ಸ್ಥಳಗಳಲ್ಲಿ ಕೆಂಪು ಬಟ್ಟೆಯ ಸೀರೆಗಳನ್ನು ಸುತ್ತಿಕೊಳ್ಳುತ್ತಾರೆ. ಕಾಲಿಗೆ ಕಾರಪಾಲೆ (ಕಾಲಿಗೆ ಕಟ್ಟಿಕೊಳ್ಳುವ ಹಾಳೆ), ಪಾದ ಪಾಲೆ (ಪಾದಕ್ಕೆ ಕಟ್ಟಿಕೊಳ್ಳುವ ಹಾಳೆ), ಗಗ್ಗರ (ದೈವಗಳ ಉಪಯೋಗಕ್ಕೆ ಮಾತ್ರ ತಯಾರು ಮಾಡಿರುವ ವೃತ್ತಕಾರದ ಬೆಳ್ಳಿಯ ಅಥವಾ ಕಂಚಿನ ಸಾಧನ, ಇದರೊಳಗೆ ಕಂಚಿನ ಕಾಯಿಗಳನ್ನು ಹಾಕಲಾಗಿದ್ದು ಅದು ಗೆಜ್ಜೆಯಂತೆ ಶಬ್ದ ಮಾಡುತ್ತದೆ), ಜಕ್ಕೆಲಣಿ ಇದು ಸೊಂಟಕ್ಕೆ ಕಟ್ಟಿಕೊಳ್ಳುವ ಅರ್ಧ ವೃತ್ತಾಕಾರದ ಹಾಳೆಯ, ತೆಂಗಿನ ತಿರಿಯ, ಬಟ್ಟೆಯ ಅಥವಾ ಲೋಹದ ಅಲಂಕಾರ ಸಾಧನವಾಗಿದೆ. ಇನ್ನು ಬೆನ್ನಿಗೆ ಅಣಿ ಅಥವಾ ಮುಡಿ. ಇದು ಹಾಳೆ, ತಿರಿ, ಲೋಹಗಳನ್ನು ಜೋಡಿಸಿ ತಯಾರಿಸಿದ ಎತ್ತರವಾದ ಸಾಧನ. ಇದು ತುಂಬಾ ಭಾರವಿರುತ್ತದೆ. ಆ ನಂತರ ದೈವದ ಕೈಗೆ ಖಡ್ತಲೆ, ಮಣಿ, ಚವಲ ನೀಡುತ್ತಾರೆ.
ಉಳ್ಳಾಲ್ತಿ ದೈವಕ್ಕೆ ಅಣಿ ಕಟ್ಟುವುದು:
ಉಳ್ಳಾಲ್ತಿ ದೈವಕ್ಕೆ ಎರಡು ರೀತಿಯ ಅಣಿಯನ್ನು ಕಟ್ಟುತ್ತಾರೆ. ಒಂದನ್ನು ಬೆನ್ನಿಗೆ ಕಟ್ಟುವ ಅಣಿ ಎಂದು ಕರೆದರೆ, ಇನ್ನೊಂದನ್ನು ಸೊಂಟಕ್ಕೆ ಕಟ್ಟುವ ಅಣಿ (ಜಕ್ಕೆಲಣಿ) ಎಂದು ಕರೆಯುತ್ತಾರೆ. ಉಳ್ಳಾಲ್ತಿ ದೈವಗಳಲ್ಲಿ ಸುಮಾರು ಐದು ವಿಧದ ಅಣಿಗಳನ್ನು ಗುರುತಿಸಬಹುದು. 1. ಮಾಣಿ-ಅನಂತಾಡಿ ಈ ಸ್ಥಳಗಳಲ್ಲಿ ಕಟ್ಟುವ ಅಣಿ. 2. ಕೆಲಿಂಜ-ಒಕ್ಕೆತ್ತ
ೂರು ಈ ಸ್ಥಳಗಳಲ್ಲಿ ಕಟ್ಟುವ ಅಣಿ. 3. ಕೇಪು ಈ ಸ್ಥಳದಲ್ಲಿ ಕಟ್ಟುವ ಅಣಿ. 4. ಕಾಂಪ್ರಬೈಲು-ಕೂಟತ್ತಜೆ-ಕಣಂತೂರು-ಪೈವಳಿಕೆ-ಉಳಿಯ ಈ ಜಾಗೆಗಳಲ್ಲಿ ಉಳ್ಳಾಲ್ತಿ ಅಮ್ಮನಿಗೆ ಕಟ್ಟುವ ಅಣಿ. 5. ಪುತ್ತೂರಿನ ಬಲ್ನಾಡು-ಕೊಯ್ಯೂರು ಈ ಜಾಗೆಗಳಲ್ಲಿ ಅಮ್ಮನಿಗೆ ಕಟ್ಟುವ ಅಣಿ. ಈ ರೀತಿಯಾಗಿ ಮುಖ್ಯವಾಗಿ ಐದು ವಿಧಗಳಿಂದ ಉಳ್ಳಾಲ್ತಿ ದೈವದ ಅಣಿಯನ್ನು ಗುರುತಿಸಬಹುದು. ಬಂಟ್ವಾಳ ತಾಲೂಕಿನ ಸಜೀಪದಲ್ಲಿ ಅಣಿ ಕಟ್ಟುವುದಿಲ್ಲ. ಇದರ ಬದಲಾಗಿ ಸೀರೆಯನ್ನಿಟ್ಟು ಸ್ತ್ರೀಯ ರೂಪದಲ್ಲಿಯೇ ದೈವಕ್ಕೆ ಕಟ್ಟುತ್ತಾರೆ.
Share on :

SUDDI

 

Copyright © 2011 Tuluworld - All Rights Reserved