Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ


✍ *ಚ೦ದ್ರಕಾ೦ತ್ ಶೆಟ್ಟಿ ಕಾರಿ೦ಜ*

ತುಳುನಾಡಿನ ಕಾರ್ಕಳ ಸೀಮೆಯ ಒಂದು ಹಳ್ಳಿಯಲ್ಲಿ ಕಲ್ಲು ಕುಟಿಗ ಜನಾಂಗದ ಶಿಲ್ಪಿಗಳ ತುಂಬು ಸಂಸಾರವೊಂದಿತ್ತು. ಮನೆಯ ಯಜಮಾನ ಶಂಬು ಕಲ್ಕುಡ ಅಪ್ರತಿಮ ಶಿಲ್ಪಿಯಾಗಿದ್ದನು. ಶ್ರವಣಬೆಳಗೋಳದಲ್ಲಿ ಸುಂದರವಾದ ಬಾಹುಬಲಿ ಮೂರ್ತಿಗೆ ಜನ್ಮ ನೀಡಿದ ಶಂಬು ಕಲ್ಕುಡ ಅಲ್ಲಿಯ ಅರಸರ ಚದುರಂಗದ ಆಟದಿಂದ ಹೊರ ಬರಲಾರದೆ ಕೀರ್ತಿಶೇಷನಾಗುತ್ತಾನೆ. ಮುಂದೆ ಇಂತಹ ಮೂರ್ತಿ ಇನ್ನೆಲ್ಲಿಯೂ ತಲೆ ಎತ್ತಬಾರದು ಅನ್ನುವ ಅಸೂಯಭಾವನೆ ಶಂಬು ಕಲ್ಕುಡನ ಸಾವಿನಲ್ಲಿ ಅಂತ್ಯಗೊಂಡಿತ್ತು.ತಾನು ಕೆತ್ತಿದ ಮೂರ್ತಿಯಿಂದಲೇ ತನಗೆ ಮರಣವಾಯಿತು ಇನ್ನೆಂದಿಗೂ ನಮ್ಮ ಮಕ್ಕಳನ್ನು ಹಣ ಅಥವಾ ಕೀರ್ತಿಯ ಆಸೆಗೆ ಮಕ್ಕಳನ್ನು ಅರಸರ ಬಳಿಗೆ ಮೂರ್ತಿ ಕೆತ್ತಲು ಕಳುಹಿಸದಂತೆ ಸಾಯುವ ಕಾಲಕ್ಕೆ ತನ್ನ ಹೆಂಡತಿಯಾದ ಈರಮ್ಮಳಿಗೆ ಚಾರನ ಕೈಯಲ್ಲಿ ಹೇಳಿ ಕಳುಹಿಸಿದ್ದ.

ತುಂಬು ಸಂಸಾರ. ಬಡತನ ಮನೆಯಲ್ಲಿ ಸೆರಗು ಹಾಕಿ ಮಲಗಿಕೊಂಡಿತ್ತು. ಮನೆಯ ಆಧಾರಸ್ತಂಬ ಕಳಚಿ ಬಿದ್ದಾಗ ಒಪ್ಪತ್ತಿನ ಊಟಕ್ಕೂ ತಾತ್ವರ ಉಂಟಾಗುತ್ತದೆ. ಆರನೆ ಮಗ ಬೀರನಿಗೆ ಅಪ್ಪ ಶಂಬು ಕಲ್ಕುಡ ತನ್ನೆಲ್ಲಾ ಶಿಲ್ಪಿ ವಿದ್ಯೆಯನ್ನು ಧಾರೆಯೆರೆದು ತನ್ನ ಕುಲಕಸೂಬಿನ ಕೊಂಡಿಯನ್ನು ಉಳಿಸಿಕೊಂಡಿದ್ದ.ಅಪ್ಪನನ್ನೇ ಮೀರಿಸುವ ಶಿಲ್ಪಿ ವಿದ್ಯೆಯನ್ನು ಮಗ ಬೀರ ತನ್ನದಾಗಿಸಿಕೊಂಡಿದ್ದನು.ಆದರೆ ಅಪ್ರತಿಮ ಶಿಲ್ಪಿಯೋಬ್ಬನಿಗೆ ರಾಜಾಶ್ರಯ ಸಿಗದೇ ಹೋದರೆ ತಾನು ಕಲಿತ ವಿದ್ಯೆ ಇದ್ದೂ ಪ್ರಯೋಜನವಿಲ್ಲ. ಬಡತನ ಹಸಿವು ದಿನಚರಿಯಾಗುತ್ತದೆ. ಹೊಟ್ಟೆ ತು೦ಬಾ ಉ೦ಡು ತೇಗಿದ ದಿನವಿಲ್ಲ. ಬಾಳಿನಲ್ಲಿ ಸ೦ತಸದ ನಗುವಿಲ್ಲ. ಎಲ್ಲರಂತೆ ಬಾಳುವುದು ದುಸ್ತರವಾಗುತ್ತದೆ.ನೆರವಿಲ್ಲದೆ ಸಂಸಾರ ಬಡತನದ ನೆರೆಯಲ್ಲಿ ಕೊಚ್ಚಿಕೊಂಡು ಉಳಿವಿಗಾಗಿ ಬೇಡುತ್ತಿತ್ತು

ಹೀಗೆ ಕಷ್ಟದ ಕತ್ತಲಲ್ಲಿ ಕೈ ತೊಳೆಯುತ್ತಿರುವ ಸಂಸಾರದ ಮುಂದೆ ಅದೊಂದು ದಿನ ಕಾರ್ಕಳದ ಭೈರವ ಅರಸನ ಚಾರನೊಬ್ಬ ಓಲೆಯೊಂದನ್ನು ಹೊತ್ತು ತಂದಿದ್ದ. ಆ ಒಲೆಯ ಒಕ್ಕಣೆ ಹೀಗಿತ್ತು. ಕಾರ್ಕಳದ ಭೈರವ ಅರಸನು ಜೈನ ಧರ್ಮದ ಆರಾಧಕನಾಗಿದ್ದು ತನ್ನ ಹೆಸರು ಚಿರಾಸ್ಥಾಯಿಯಾಗಿ ಉಳಿಯುವಂತೆ ಮಾಡಲು ಬಲು ಸುಂದರವಾದ ಬಾಹುಬಲಿಯ ಮೂರ್ತಿಯನ್ನು ಕೆತ್ತಲು ನಿರ್ಧರಿಸಿದ್ದು. ಅದಕ್ಕೆ ಯೋಗ್ಯನಾದ ಶಿಲ್ಪಿ ಬೀರ ಶಂಬು ಕಲ್ಕುಡನಲ್ಲದೆ ಈ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ. ನಮ್ಮ ಅಭಿಲಾಷೆಯನ್ನು ಒಪ್ಪಿ ನಮ್ಮ ಆಸೆಯನ್ನು ಕಾರ್ಯರೂಪಕ್ಕೆ ತಂದರೆ, ಹತ್ತೂರನ್ನು ಉಂಬಳಿಯಾಗಿ ನೀಡುತ್ತೇವೆ. ಆನೆಯ ಮೇಲೆ ಮೆರವಣಿಗೆ ಬರಿಸಿ ಆನೆ ಹೊರುವಷ್ಟು ಚಿನ್ನ ಬೆಳ್ಳಿಯನ್ನು ಕಾಣಿಕೆಯಾಗಿ ನೀಡುತ್ತವೆ. ಅದಲ್ಲದೆ ಕೈಗೆ ಚಿನ್ನದ ಕಡಗ ತೊಡಿಸಿ ಆಸ್ಥಾನದ ಶಿಲ್ಪಿಯಾಗಿ ಸ್ವೀಕರಿಸುತ್ತೇವೆ . ನಿಮ್ಮ ಒಪ್ಪಿಗೆಯ ಸಂದೇಶಕ್ಕೆ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದೇನೆ ಅನ್ನುತ್ತ ಅರಸನ ಅಂಕಿತದ ಷರ ಬರೆದಿತ್ತು.ಭೈರವ ಅರಸನೇ ತನ್ನ ರಾಜ ಮುದ್ರೆಯನ್ನು ಒತ್ತಿದ್ದ.

ಶಿಲ್ಪಿಯೋಬ್ಬನಿಗೆ ರಾಜಾಶ್ರಯದ ಕರೆಯೋಲೆ ಬಂದರೆ ಕೇಳಬೇಕೆ ? ಬೀರ ಎಂದಿಲ್ಲದಂತೆ ಖುಷಿಗೊಳ್ಳುತ್ತಾನೆ. ಒಳಗೊಳಗೇ ಕನಸಿನ ಗೋಪುರ ಕಟ್ಟಿಕೊಳ್ಳುತ್ತಾನೆ. ತನ್ನನ್ನು ಕಳುಹಿಸಿಕೊಡುವಂತೆ ತನ್ನ ಪ್ರೀತಿಯ ತಾಯಿಯನ್ನು ಅಂಗಲಾಚುತ್ತಾನೆ. ಆದರೆ ಹೆತ್ತ ಕರುಳು ಮಮ್ಮಲ ಮರುಗುತ್ತದೆ. ಅರಸರ ಸಹವಾಸ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ, ನಾವು ಒಪ್ಪತ್ತು ಗಂಜಿಯಾದರೂ ಕುಡಿದು ಸುಖವಾಗಿರೋಣ ಆದರೆ ದುಷ್ಟರೂ ಅಸೂಯ ಪ್ರವೃತಿಯರಾದ ಅರಸರ ಒಡನಾಟ ನಮಗೆ ಬೇಡ ಮಗು ಎಂದು ಪರಿ ಪರಿಯಾಗಿ ಮಗನಿಗೆ ಬುದ್ಧಿವಾದವನ್ನು ಹೇಳುತ್ತಾಳೆ
ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ :-2

ಮಾರನೆದಿನ ಬಾನ ಭಾಸ್ಕರ ಭೂಮಿಗೆ ಬಣ್ಣದ ಬೆಳಕು ಚೆಲ್ಲುವ ಮುನ್ನವೇ ಉತ್ಸಾಹದಿಂದ ಏಳುತ್ತಾನೆ. ತನಗೆ ಬೇಕಾದ ಪರಿಕರಗಳನ್ನು ಜೋಡಿಸಿಕೊಳ್ಳುತ್ತಾನೆ. ತಾಯಿಯ ಕರುಳೇ ಕರಗಿ ಕಣ್ಣೀರಾಗಿ ಹರಿದಾಗ ಮಗ ಬೀರ ಕಲ್ಕುಡ ತನ್ನ ಪ್ರೀತಿಯ ತಾಯಿಯನ್ನು ಅಪ್ಪಿಕೊಂಡು ತನ್ನ ಕೈಯಿಂದ ತಾಯಿಯ ಕಣ್ಣೀರನ್ನು ಒರಸುತ್ತಾನೆ. ಅರಸರು ಕರೆದು ಹೇಳಿದ ಕೆಲಸವನ್ನು ಕಾರಣವಿಲ್ಲದೆ ತಿರಸ್ಕರಿಸಿದರೆ ಸುಮ್ಮನೆ ಅರಸರೊಂದಿಗೆ ಹಗೆತನ ಬೆಳಸಿಕೊಂಡಂತೆ ಆಗುತ್ತದೆ ಅನ್ನುವುದನ್ನು ತಾಯಿಗೆ ವಿವರಿಸಿ ಹೇಳುತ್ತಾನೆ. ಮೇಲಾಗಿ ಅಪ್ಪ ಕಲಿಸಿದ ಅಪೂರ್ವವಾದ ವಿದ್ಯೆಯನ್ನು ನನ್ನೊಳಗೆ ಸಾಯಲು ಬಿಡುವುದು ಶಿಲ್ಪಿಯೊಬ್ಬನಿಗೆ ಯೋಗ್ಯವಾದ ನಡೆಯಲ್ಲ ಅನ್ನುವುದನ್ನು ತನ್ನ ತಾಯಿಗೆ ಮನದಟ್ಟು ಮಾಡುತ್ತಾನೆ. ದುರ್ಭರವಾದ ಬದುಕು ಮತ್ತು ದುಸ್ತರರವಾದ ಬಾಳನ್ನು ಗೆದ್ದು ತುಳುನಾಡಿನಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುತ್ತೇನೆ ಅನ್ನುವ ಭರವಸೆಯನ್ನು ತಾಯಿಗೆ ನೀಡಿ ಆಶೀರ್ವಾದ ಬೇಡುತ್ತಾನೆ. ಮಗ ಹಠ ಹಿಡಿದಾಗ, ಒಲ್ಲದ ಮನಸಿನಿಂದ ತಾಯಿ ಈರಮ್ಮ ಮಗನಿಗೆ ಆಶೀರ್ವಾದ ನೀಡಿ ಹರಸುತ್ತಾಳೆ. ತುಕ್ಕು ಹಿಡಿದ ಉಳಿ ಮತ್ತು ಬಾಜಿಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಕಾರ್ಕಳದ ಅರಸನ ಅರಮನೆಯ ಹಾದಿ ಹಿಡಿಯುತ್ತಾನೆ ಬೀರ ಕಲ್ಕುಡ

ಕೆಲಸವನ್ನು ಒಪ್ಪಿಕೊಂಡು ಬಂದ ಬೀರ ಕಲ್ಕುಡನನ್ನು ಪ್ರೀತಿ ಮತ್ತು ಆದರಗಳಿಂದ ಬರಮಾಡಿಕೊಳ್ಳುತ್ತಾನೆ ಭೈರವರಸ. ಅರಸನ ಸಜ್ಜನಿಕೆ ಮತ್ತು ನಯವಿನಯವನ್ನು ಕಂಡು ಅರಸ ಹೇಳಿದ ಸಮಯಕ್ಕಿಂತ ಮೊದಲೇ ಕೆಲಸ ಮಾಡಿಕೊಡುವ ವಾಗ್ದಾನನ್ನು ಮಾಡುತ್ತಾನೆ ಬೀರ ಕಲ್ಕುಡ. ಕೆತ್ತಬೇಕಾದ ಕಲ್ಲಿಗೆ ಪೂಜೆ ಮಾಡಿ ಬೀರ ಕಲ್ಕುಡನಿಗೆ ಸಕಲ ಜವಾಬ್ಧಾರಿಯನ್ನು ಒಪ್ಪಿಸುತ್ತಾನೆ ಭೈರವರಸು. ಇಂತಹ ಸುಘಳಿಗೆಯಲ್ಲಿ ಬೀರ ಕಲ್ಕುಡ ಅರಸನಲ್ಲಿ ಒಂದು ಬಿನ್ನಹವನ್ನು ಮಾಡುತ್ತಾನೆ " ಕಲೆಯನ್ನು ತಪಸ್ಸಾಗಿ ಸ್ವೀಕರಿಸುವ ವಂಶ ನಮ್ಮದು ಪ್ರಭುಗಳೇ, ಕಲೆ ಏಕಾಗ್ರತೆಯನ್ನು ಬೇಡುತ್ತದೆ. ಮನಸನ್ನು ಕೆಲಸದ ಮೇಲೆಯೇ ಹರಿಯಬಿಡಬೇಕಾದ ಅನಿವಾರ್ಯವಿರುವುದರಿಂದ ನನ್ನ ಕೆಲಸದ ಬಗ್ಗೆ ಮಧ್ಯದಲ್ಲಿ ನನಗೆ ತೊಂದರೆ ಕೊಡುವುದಾಗಲೀ ಅಥವಾ ನನ್ನ ಏಕಾಗ್ರತೆಗೆ ಬಂಗ ತರುವುದಾಗಲಿ ನಡೆಯದಂತೆ ನೋಡಿಕೊಳ್ಳುವ ಜವಾಬ್ಧಾರಿ ನಿಮ್ಮ ಮೇಲಿದೆ. ನಾನಿರುವ ಜಾಗಕ್ಕೆ ಯಾರನ್ನು ಬಿಡಬಾರದು" ಅನ್ನುತ್ತಾನೆ ಬೀರ ಕಲ್ಕುಡ

ಬೀರ ಕಲ್ಕುಡನ ಮಾತಿಗೆ ಒಪ್ಪಿ ನಡೆಯುತ್ತಾನೆ ಭೈರವ ಅರಸ.ಬೀರ ಕಲ್ಕುಡ ತನ್ನ ಕಲೆಯನ್ನು ವ್ರುತವಾಗಿ ಸ್ವೀಕರಿಸಿದ್ದ. ಹಗಲು ರಾತ್ರಿಗಳು ಇರುವನ್ನು ಮರೆತಿದ್ದ. ಹಸಿವು ಬಾಯರಿಕೆಗಳ ಗೊಡವೆಯನ್ನು ತೊರೆದಿದ್ದ. ದಿನೇ ದಿನೇ ಬಾಹುಬಲಿಯ ದಿವ್ಯ ರೂಪ ಪಡಿಮೂಡ ತೊಡಗುತ್ತದೆ. ಕರಿಗಲ್ಲಲ್ಲಿ ಸತ್ಯಮೂರ್ತಿಯ ಪ್ರತಿಬಿಂಬ ಜೀವ ತಲೆಯತೊಡಗುತ್ತದೆ.ತುಳುನಾಡಿನ ನೆನಪಿನ ಪುಟದಲ್ಲಿ ಉಳಿಯುವ ಭವ್ಯ ಮೂರ್ತಿಯೊಂದು ಸದ್ದಿಲ್ಲದೇ ಬೀರನ ಕೈಯಲ್ಲಿ ಎದ್ದು ನಿಲ್ಲತೊಡಗಿತು.

ಭೈರವ ಅರಸ ಬಾಹುಬಲಿಯ ಮೂರ್ತಿ ಕೆತ್ತಿಸುವ ಸುದ್ದಿ ತುಳುನಾಡಿನಾದ್ಯಂತ ಪಸರಿಸಿಕೊಳ್ಳುತ್ತದೆ. ಅಂತಹ ಭವ್ಯ ಮೂರ್ತಿಯನ್ನು ನೋಡುವುದಕ್ಕೆ ತುಳುನಾಡು ಕಾತರದಿಂದ ಕಾಯುತ್ತಿರುತ್ತದೆ. ಅಂತಹ ದಿನಗಳಲ್ಲಿ ಭೈರವ ಅರಸನ ಪ್ರೀತಿಯ ಮಗಳಾದ ಯಶೋಮತಿಯು ತನ್ನ ಗೆಳತಿಯರೊಂದಿಗೆ ಬಾಹುಬಲಿಯನ್ನು ನೋಡುವ ಆಸೆಯಿಂದ ಶಿಲ್ಪ ಕುಟೀರಕ್ಕೆ ಬರುತ್ತಾಳೆ. ತನ್ನ ತಂದೆಯಂತೆ ಜಂಬ ಮತ್ತು ಅಸೂಯ ಪ್ರವ್ರುತ್ತಿಯವಳಾದ ಯಶೋಮತಿ ಬೀರ ಕಲ್ಕುಡ ತನ್ನನ್ನು ಅತ್ಯಂತವಾಗಿ ಆಧರಿಸಬಹುದು ಅನ್ನುವ ನಿರೀಕ್ಷೆಯಿಂದ ಉಬ್ಬಿಕೊಂಡು ಮೂರ್ತಿಯನ್ನು ನೋಡುವ ನೆಪದಿಂದ ಅಲ್ಲಿಗೆ ಬರುತ್ತಾಳೆ. ಆದರೆ ಬೀರ ತನ್ನ ಕೆಲಸವನ್ನು ಬಿಟ್ಟು ಕೆಳಗಿಳಿಯುವುದಿಲ್ಲ. ತನ್ನ ಏಕಾಗ್ರತೆಯನ್ನು ಕೆತ್ತನೆಯಲ್ಲಿ ಕೇಂದ್ರಿಕರಿಸಿದ್ದ ಬೀರನಿಗೆ ರಾಜಕುಮಾರಿಯ ಕೂಗು ಕೇಳಿಸುವುದೇ ಇಲ್ಲ

ಬೀರನ ಕೆಲಸ ನಿಷ್ಠೆ ರಾಜಕುಮಾರಿಗೆ ಅವಮಾನವಾಗಿ ಕಾಡುತ್ತದೆ. ಸೇಡು ಹೆಡೆಯಾಡುತ್ತದೆ. ತನ್ನ ಸಖಿಯರೊಂದಿಗೆ ಅಪ್ಪ ಭೈರವ ಅರಸನ ಬಳಿಗೆ ಅಳುತ್ತಾ ಓಡಿ ಬರುತ್ತಾಳೆ. ಬೀರ ತನ್ನನ್ನು ಕಣ್ಣಿಂದ ಕಣ್ಸನ್ನೆ ಮಾಡಿದ. ಕೈಯಿಂದ ಕೂಗಿ ಕರೆದ. ಕಾಲನ್ನು ನೆಲಕ್ಕೆ ಬರೆಯುತ್ತಾ ಕಾಮಕೇಳಿಗೆ ಕರೆದ ಅಪ್ಪ ಅನ್ನುತ್ತಾ ಹಸಿ ಸುಳ್ಳನ್ನು ತಂದು ಸತ್ಯದಂತೆ ಬಣ್ಣಿಸುತ್ತಾರೆ. ಉರಿವ ಕೆಂಡವಾಗುತ್ತಾನೆ ಅರಸ. ಜೊತೆಗೆ ಸಂತಸವೂ ಆಗಿತ್ತು. ಮಗಳನ್ನು ಛೇಡಿಸಿದ ಕೈ ಮತ್ತು ಕಾಲನ್ನು ಕತ್ತರಿಸಿದರೆ ಮಗಳಿಗೂ ನ್ಯಾಯ ಸಿಗುತ್ತದೆ ಮತ್ತು ಬೀರ ಇನ್ನೊಂದು ಕಡೆ ಇಂತಹ ಸುಂದರವಾದ ಮೂರ್ತಿ ಕೆತ್ತದಂತೆ ಆಗುತ್ತದೆ. ಬೀರನ ಕೈಗಳು ಉಳಿದರೆ ಇನ್ನೊಬ್ಬ ಜೈನ ಅರಸ ನನಗಿಂತ ಚೆನ್ನಾಗಿರುವ ಮೂರ್ತಿ ಕೆತ್ತಿಸಿದರೆ ತನ್ನ ಸಾಧನೆ ನೀರಿನಲ್ಲಿ ಇಟ್ಟ ಹೋಮದಂತೆ ಆಗುತ್ತದೆ ಅನ್ನುವ ದುರಾಲೋಚನೆ ಭೈರವ ಅರಸನ ಮನದಲ್ಲಿ ನಂಜಿನ ಮೊಳಕೆ ಬಿಟ್ಟಿತ್ತು
ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ :-3

ದಿನಗಳು ಕಳೆದಂತೆ ಬೀರನ ತನ್ಮಯತೆ ಸತ್ಯಮೂರ್ತಿಯಾಗಿ ಜನ್ಮ ತಲೆಯತೊಡಗುತ್ತದೆ. ಘನ ಗಾತ್ರದ ಕರಿಗಲ್ಲು ಬೀರನ ಕೈಯೊಳಗೆ ವೈರಾಗ್ಯ ಮೂರ್ತಿಯಾಗಿ ಮಂದಹಾಸ ಬೀರುತ್ತದೆ. ಬೀರ ಕಲ್ಕುಡನ ಸತ್ಯ ಮತ್ತು ನಿಷ್ಠೆಗಳು ಮಾತಾಡುತ್ತಿದ್ದವು. ಕೆತ್ತಿಸಿದವನಿಗಿಂತ ಕೆತ್ತಿದವನು ಯಾರು ? ಎಂದು ಜನರ ಕಣ್ಣುಗಳು ಹುಡುಕುವುದರಲ್ಲಿ ಅನುಮಾನವೇ ಇಲ್ಲ. ಪ್ರಪಂಚವೆಂಬ ಪುಸ್ತಕದಲ್ಲಿ ತುಳುನಾಡು ತನ್ನ ಹೆಮ್ಮೆಯ ಪುಟ ತೆರೆಯಲು ಇನ್ನು ಕೇವಲ ದಿನಗಳು ಮಾತ್ರ ಉಳಿದಿವೆ. ತುಳುನಾಡಿನ ಜನರು ಬೀರ ಕೆತ್ತಿದ ವೈರಾಗ್ಯ ಮೂರ್ತಿಯನ್ನು ನೋಡಿ ಧನ್ಯರಾಗಲು ತದೆಕತೆಯಿಂದ ಕಾದು ಕುಳಿತ್ತಿದ್ದರು

ಅದೊಂದು ದಿನ ಮೂರ್ತಿಯ ಕೆತ್ತನೆ ಮುಗಿದು ಹೋಗಿ ಬಾಹುಬಲಿಯ ಪ್ರತಿಸ್ಥಾಪನೆಗೆ ದಿನ ನಿಗದಿಯಾಗುತ್ತದೆ. ತುಳುನಾಡಿನ ತುಂಬಾ ಕರೆಯೋಲೆಗಳು ಹಂಚಲ್ಪಡುತ್ತವೆ. ಪೇಟೆ ಹಳ್ಳಿ ಬೀದಿಗಳಲ್ಲಿ ಡಂಗೂರ ಸಾರಿ ಮಹಾ ಮಸ್ತಕಾಭಿಷೇಕಕ್ಕೆ ತುಳುನಾಡಿನ ಸಮಸ್ತ ಜನರೂ ಸೇರುವಂತೆ ನಿಗದಿ ಮಾಡುತ್ತಾರೆ. ಆದರೆ ಸುಂದರವಾದ ಮೂರ್ತಿಯನ್ನು ಕೆತ್ತಿದ ಬೀರನ ಮನೆಗೆ ಮಾತ್ರ ಯಾವುದೇ ಆಹ್ವಾನ ಹೋಗುವುದಿಲ್ಲ. ಮೂರ್ತಿಯನ್ನು ಕೆತ್ತಿ ಅಣಿಗೊಳಿಸುವ ತನಕ ತನ್ನನ್ನು ಹೊತ್ತು ಮೆರೆಯುತ್ತಿದ್ದ ಅರಸರು ಕೆಲಸ ಮುಗಿದ ಮೇಲೇಕೆ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಅನ್ನುವ ಅನುಮಾನ ಬೀರನಿಗೆ ಬಾರದಿರಲಿಲ್ಲ. ಅದೊಂದು ಶುಭ ದಿನದಂದು ಕೆತ್ತಿದ ಮೂರ್ತಿಯನ್ನು ಅರಸರಿಗೆ ಬಿಟ್ಟುಕೊಡುವ ಕಾರ್ಯವೂ ನಡೆದು ಹೋಯಿತು.

ಮೂರ್ತಿಯನ್ನು ಅರಸರ ಸುಪರ್ಧಿಗೆ ಒಪ್ಪಿಸಿದ ದಿನದಂದು ರಾತ್ರಿ ಅರಸನ ಚಾರರಿಬ್ಬರು ಬಂದು ಬೀರನ ಕುಟೀರದ ಬಾಗಿಲು ತಟ್ಟಿದ್ದರು. ' ಅರಸರು ನಿಮ್ಮನ್ನು ಬರ ಹೇಳಿದ್ದಾರೆ. ಮೂರ್ತಿ ಕೆತ್ತಿದ ನಿಮಗೆ ಯೋಗ್ಯವಾದ ಬಹುಮಾನ ಕಾಣಿಕೆಗಳನ್ನು ನೀಡಲು ನಿರ್ಧರಿಸಿದ್ದಾರೆ.ನೀವು ಸಿದ್ಧರಾಗಿ ಬರಬೇಕಂತೆ' ಅರಸ ಹೇಳಿದಂತೆ ಭಟರು ಬಂದು ಹೇಳಿದ್ದರು ' ಇಂತಹ ನಡು ರಾತ್ರಿಯ ಸಮಯದಲ್ಲಿ ಕಾಣಿಕೆ ಕೊಡುವುದೇ ? ತುಳುನಾಡಿನ ಸಮಸ್ತ ಜನರ ಮುಂದೆ ತನ್ನ ಕೈಗೆ ಕಡಗ ತೊಡಿಸುತ್ತೇನೆ ಎಂದು ಮಾತು ಕೊಟ್ಟವರಲ್ಲವೇ ನಮ್ಮ ಅರಸರು ?' ಬೀರನ ಅನುಮಾನ ಪ್ರಶ್ನೆಯ ರೂಪ ತಳೆಯುತ್ತದೆ ' ನಿಮಗೆ ಕೊಡುವ ಅಪಾರವಾದ ಕಾಣಿಕೆಗಳು ಊರ ಪರ ಜನರಿಗೆ ತಿಳಿಯದೆ ಇರಲಿ ಅನ್ನುವ ಇರಾದೆ ನಮ್ಮ ಅರಸರದು. ಅರಸರ ಅಜ್ನ್ಯೇಯನ್ನು ಮೀರದೆ ಈಗಲೇ ಹೊರಡಿ' ಭಟರ ದರ್ಪದ ಸ್ವರಕ್ಕೆ ಬಡಪಾಯಿ ಬೀರನ ಸ್ವರ ತನ್ನಿಂದ ತಾನೇ ಉಡುಗಿ ಹೋಗಿತ್ತು

ಕಾಣದ ಕತ್ತಲ ದಾರಿಯಲ್ಲಿ ಭಟರ ಸುಪರ್ಧಿಯಲ್ಲಿ ಅವರು ಹೇಳಿದಂತೆ ಕಾಲು ಹಾಕುತ್ತಾನೆ ಬೀರ ಕಲ್ಕುಡ. ತನ್ನ ತಾಯಿ ಅದೆಷ್ಟು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾಳೆಯೋ ಏನೋ ಅರಸ ಕೊಟ್ಟ ಕಿರು ಕಾಣಿಕೆಯಾದರೂ ಸರಿ ಅಮ್ಮನ ಪಾದದ ಬುಡದಲ್ಲಿ ಇಟ್ಟು ನಮ್ಮ ಅಮ್ಮ ಒಂದು ದಿನವಾದರೂ ನಗುವುದನ್ನು ನೋಡಬೇಕು. ನಮ್ಮ ಮನೆಯಲ್ಲಿ ಶಾಶ್ವತವಾಗಿ ನಿಂತಿರುವ ಬಡತನ ಮತ್ತು ದಾರಿದ್ರ್ಯ ಇನ್ನಾದರೂ ತೊಲಗಲಿ ಅನ್ನುತ್ತಾ ವಿಶ್ವಕರ್ಮ ದೇವರನ್ನು ಬೇಡಿಕೊಳ್ಳುತ್ತಾನೆ ಬೀರ ಕಲ್ಕುಡ . ತನ್ನ ಪ್ರೀತಿಯ ತಂಗಿ ಕಾಳಮ್ಮ ತನಗಾಗಿ ಅದೆಷ್ಟು ಪರಿತಪಿಸಿಕೊಂಡಿರಬಹುದು ತಂಗಿಯ ನೆನಪಿನ ಇರುಹುಗಳ ಕುರುಹುಗಳು ಕಣ್ಣಾಲಿಗಳಲ್ಲಿ ಮುತ್ತಿನ ಹನಿಯಂತೆ ನೀರಾಗಿ ಜಿನುಗುತ್ತವೆ.....
ಕಲ್ಲುಟ್ಟಿ ಕಲ್ಕುಡ ಕಥೆ 4

   ಬೀರ ಕಲ್ಕುಡನಿಗೆ ಭೈರವ ಅರಸರು ನಿಗದಿ ಮಾಡಿದ ಸಮಯಕ್ಕಿಂತಲೂ ಮೊದಲಾಗಿ ಅವರು ಅಂದುಕೊಂಡಿದ್ದಕ್ಕಿಂತ ಉತ್ತಮವಾದ ಮೂರ್ತಿಯನ್ನು ಕೆತ್ತಿ ಕೊಟ್ಟ ಅಭಿಮಾನದಿಂದ ಅರಸರ ಬಗ್ಗೆ ಅಪಸಂಕೆ ಇರಲಿಲ್ಲ. ಅರಸ ನಿಜವಾಗಿಯೂ ತನ್ನನ್ನು ಸನ್ಮಾನಕ್ಕಾಗಿ ಕರೆದಿದ್ದಾನೆ ಅನ್ನುವ ಮುಗ್ಧವಾದ ಭಾವನೆಯಿಂದ ಭಟರು ತಾಕೀತು ಮಾಡಿದಂತೆಲ್ಲಾ ನಡೆಯುತ್ತಾನೆ ಬೀರ ಕಲ್ಕುಡ!. ಆದರೆ ಭಟರು ಕರೆದುಕೊಂಡು ಹೋಗಿದ್ದು ಮಾತ್ರ ಘೋರ ತಪ್ಪು ಮಾಡಿದ ಜನರನ್ನು ಶಿಕ್ಷಿಸುವ ಹಜಾರಕ್ಕೆ!!. ಸಾಕ್ಷಾತ್ ಭೈರವ ಅರಸನೇ ಬೀರನನ್ನು ಕಾಣುವುದಕ್ಕೆ ಕುಳಿದಿದ್ದ. ತನ್ನ ಪಕ್ಕದಲ್ಲಿ ಕ್ರೂರ ಮುಖದ ಭಟರಿಬ್ಬರು ಬಂಗಾರದ ದೊಡ್ಡ ಹರಿವಾಣದಲ್ಲಿ ಕೆಂಪು ಬಟ್ಟೆಯನ್ನು ಹೊದಿಸಿ ಬೀರನಿಗಾಗಿಯೇ ಕಾಯುತ್ತಾ ನಿಂತವರಂತೆ ಇತ್ತು ಅವರ ಹಾವಭಾವಗಳು!

ಭಕ್ತಿಯಿಂದ ಕೈ ಮುಗಿದು ಅರಸರ ಪಾದಗಳಿಗೆ ವಂದಿಸುತ್ತಾನೆ ಬೀರ. " ಅಮರ ಶಿಲ್ಪಿಗಳ ವಂಶ ನಮ್ಮದು ಅರಸರೆ, ನೀವು ಹೇಳಿದ ಕೆಲಸವನ್ನು ತಪಸ್ಸಾಗಿ ಸ್ವೀಕರಿಸಿದೆ. ಇಡೀ ದೇಶವೇ ಗಡಿ ದಾಟಿ ಹೆಮ್ಮೆ ಪಡುವ ರೀತಿಯಲ್ಲಿ ನಿಮ್ಮ ಕೆಲಸವನ್ನು ಮಾಡಿಕೊಟ್ಟಿದ್ದೇನೆ ಅನ್ನುವ ಆತ್ಮಾಭಿಮಾನದ ಮುಂದೆ ಸನ್ಮಾನಗಳು ಲೆಕ್ಕಕ್ಕೆ ಮಾತ್ರ. ಆದರೆ ನನ್ನ ಬಡಪಾಯಿ ತಾಯಿ ಮತ್ತು ನನ್ನ ಪ್ರೀತಿಯ ತಂಗಿ ನಾನು ಏನು ಹೊತ್ತು ತರುತ್ತೇನೆ ಅನ್ನುವುದನ್ನೇ ದಾರಿಯಲ್ಲಿ ಕಣ್ಣಿಟ್ಟು ಕಾಯುತ್ತಿರಬಹುದು. ನಾನು ಆದಷ್ಟು ಬೇಗ ನನ್ನ ಪರಿವಾರವನ್ನು ಸೇರಬೇಕು" ಬೀರ ಅತಿ ವಿನಯದಿಂದ ಅರಸರಲ್ಲಿ ನಿವೇಧಿಸಿಕೊಳ್ಳುತ್ತಾನೆ.

ಭೈರವ ಅರಸ ತನ್ನ ಕುಹಕದ ನಗೆಯನ್ನು ಚೆಲ್ಲಿ ಹೇಳುತ್ತಾನೆ " ಎಲ್ಲಾದರೂ ಉಂಟೇ ಇಷ್ಟು ದೊಡ್ಡದಾದ ಸಾಧನೆಯನ್ನು ಮಾಡಿದವರನ್ನು ಸತ್ಕರಿಸದೆ ಹೋದರೆ ಲೋಕ ಮೆಚ್ಚುವುದೇ ? ಯಾವ ಕೈಗಳಿಗೆ ಬಲೆ ತೊಡಿಸಬೇಕು ನೀವೇ ಹೇಳಿ ಅಮರ ಶಿಲ್ಪಿಗಳೇ ? " ಎನ್ನುತ್ತಾ ಕೈ ಮುಂದೆ ಮಾಡುವಂತೆ ಹೇಳುತ್ತಾನೆ

ಪಾಪ ಏನೂ ಅರಿಯದ ಮುಗ್ಧ ಬೀರ ತನ್ನ ಬಲದ ಕೈಯನ್ನು ಹೆಮ್ಮೆಯಿಂದ ಮುಂದೆ ಎತ್ತುತ್ತಾನೆ. ಅರಸ ಭಟರಿಗೆ ಕಣ್ಣು ಸನ್ನೆ ಮಾಡುತ್ತಾನೆ. ಹರಿವಾಣದಲ್ಲಿ ಇರಿಸಿದ್ದ ಖಡ್ಗದಿಂದ ಬೀರನ ಬಲದ ಕೈಯನ್ನು ಒಂದೇ ಏಟಿಗೆ ತುಂಡು ಮಾಡುತ್ತಾರೆ ಕ್ರೂರ ಭಟರು. ಅರಸ ಕನಿಕರವೇ ಇಲ್ಲದವರಂತೆ ಮತ್ತೊಮ್ಮೆ ಕಣ್ಸನ್ನೆ ಮಾಡುತ್ತಾನೆ. ಕೈಯನ್ನು ಕಡಿದ ಖಡ್ಗ ಬೀರನ ಎಡದ ಕಾಲನ್ನು ತುಂಡರಿಸುತ್ತದೆ.

ರಕ್ತದ ಓಕುಳಿಯ ಮೇಲೆ ಹೊರಲಾಡುತ್ತಾನೆ ಬೀರ ಕಲ್ಕುಡ!. ಹೃದಯಕ್ಕೆ ಆದ ಗಾಯದ ಮುಂದೆ ದೇಹಕ್ಕೆ ಆದ ಗಾಯ ಗೌಣವಾಗುತ್ತದೆ. ತನಗಾದ ಬೇಸರ ಅರಸರ ಮುಂದೆ ಶಪಥವನ್ನು ನುಡಿಸುತ್ತವೆ. " ಅರಸರೆ, ಕೈ ಕಾಲುಗಳು ಹೋದ ಮಾತ್ರಕ್ಕೆ ಕಲಾವಿದನ ಕೈಯೋಳಗಿರುವ ಕಲೆ ಇಂಗುವುದಿಲ್ಲ. ನಾನು ಅಮರ ಶಿಲ್ಪಿಗಳ ವಂಶದಲ್ಲಿ ಹುಟ್ಟಿದ್ದೇ ಆದರೆ ತುಳುನಾಡಿನಲ್ಲಿ ಇದಕ್ಕಿಂತಲೂ ಸುಂದರವಾದ ಮೂರ್ತಿಯೊಂದನ್ನು ಕೆತ್ತಿ ತಲೆ ಎತ್ತಿ ನಿಲ್ಲುಸುತ್ತೇನೆ.ತುಳುನಾಡಿನ ಪ್ರತಿಯೊಬ್ಬ ಜನರಿಗೂ ನಿಮ್ಮ ಕ್ರೂರ ಕಥೆಯಲ್ಲಿ ಈ ಮೂರ್ತಿಗಳು ಸಾರುತ್ತಾ ಇರಲಿ " ಅನ್ನುತ್ತಾನೆ

ಭೈರವ ಅರಸನಿಗೆ ನಗು ಬರುತ್ತದೆ ' ಕೈ ಕಾಲು ಕಳೆದುಕೊಂಡಾಗ ಬರುವ ಮಾತುಗಳಿಗೆ ಹೆದರಬೇಕಾಗಿಲ್ಲ. ಕತ್ತಲು ಕಳೆಯುವ ಮುನ್ನ ಇವನನ್ನು ಕಾರ್ಕಳ ಸೀಮೆಯಿಂದ ಆಚೆ ಬಿಸಾಕಿ ಬನ್ನಿ' ಎನ್ನುತ್ತಾ ಭೈರವ ಅರಸ ತನ್ನ ಕಟ್ಟಾಳುಗಳಿಗೆ ಆಜ್ಞೆಯನ್ನು ಈಯ್ಯುತ್ತಾನೆ...
ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ :-5

ಅದು ವೇಣೂರಿನ ಅರಮನೆ. ಸಂಜೆಯ ಗೋಧೂಳಿಯ ಸೂರ್ಯನ ಕಿರಣಗಳಿಗೆ ಬಂಗಾರದ ಬಣ್ಣವಿಟ್ಟಂತೆ ಹೊಳೆಯುತ್ತಿತ್ತು. ಸಂಜೆಯ ಸಮಯವಾದುದರಿಂದ ಎಂದಿನಂತೆ ಅರಮನೆಯ ಉಪ್ಪರಿಗೆಯನ್ನು ಏರಿಕೊಂಡು ಎಲೆಅಡಿಕೆ ಮೆಲ್ಲುತ್ತಿದ್ದಾರೆ ವೇಣೂರಿನ ಅರಸರಾದ ತಿಮ್ಮಣ್ಣ ಅಜಿಲರು. ಸಂಜೆಯ ಹಿತವಾದ ಗಾಳಿಗೆ ಮಯ್ಯೋಡ್ದುತ್ತಾ ತೂಗುಮಣೆಯಲ್ಲಿ ಕೂತು ತನ್ನ ಊರುಗೋಲನ್ನು ನೆಲಕ್ಕೆ ಒತ್ತಿ ತೂಗಿಕೊಳ್ಳುವುದು ಅವರ ದಿನಚರಿ. ಹೊಗೆಸೊಪ್ಪಿನ ಜೋಂಪು ತಲೆಗೆ ಹತ್ತಿದಾಗ, ಎದುರಿಗೆ ಕಾಣುವ ಗದ್ದೆಗಳನ್ನು ನೋಡುತ್ತಾ ಕನಸು ಕಾಣುವುದು ತುಂಬಾ ಇಷ್ಟವಾದ ವಿಷಯವಾಗಿತ್ತು.
ಆದರೆ ಈಗೇಕೋ ಮನಸಿನ ತುಂಬಾ ಬೇಸರವೇ ಅಡ್ಡಾಡುತ್ತಿದೆ. ಹೇಳುವುದಕ್ಕೆ ತುಳುನಾಡಿನ ತುಂಬಾ ಜೈನ ಮನೆತನದ ರಾಜೆರೇ ರಾಜಭಾರ ನಡೆಸಿಕೊಂಡು ಬರುತ್ತಿದ್ದ ಕಾಲವದು. ಆದರೆ ಅಸೂಯೆ ಮತ್ತು ಮಾತ್ಸರ್ಯದಿಂದ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಒಬ್ಬರ ಏಳಿಗೆಯನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ .ಬೂದಿ ಮುಚ್ಚಿದ ಕೆಂಡಂತೆ ತಮ್ಮೊಳಗೆಯೇ ಕುದಿಯುತ್ತಿದ್ದವು. ನಿತ್ಯ ಒಂದಿಲ್ಲವೊಂದು ಕಿರಿ. ತಮ್ಮೊಳಗೆಯೇ ಪೈಪೋಟಿ.
ಹಾಗೆಂದು ಕೊಂಡರೆ ಬಾಹುಬಲಿಯ ಮೂರ್ತಿಯನ್ನು ಕೆತ್ತಿಸಿ ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದವರಲ್ಲಿ ವೇಣೂರಿನ ಅರಸರೆ ಮೊದಲಿಗರು. ತಮ್ಮ ಮನದಾಸೆಯನ್ನು ಪೂರೈಸುವ ಇಂಗಿತದಲ್ಲಿ ಶಿಲ್ಪಿಗಾಗಿ ಹುಡುಕಾಡುತ್ತಿದ್ದರು. ವೇಣೂರಿನ ಅರಸರು ಬಾಹುಬಲಿಯನ್ನು ಕೆತ್ತಿಸುತ್ತಿದ್ದಾರೆ ಅನ್ನುವ ವರ್ತಮಾನ ತನ್ನ ಗುಪ್ತಚಾರರಿಂದ ತಿಳಿದ ಕಾರ್ಕಳದ ಅರಸ ಹಾಗೇನಾದರೂ ಆದರೆ ತುಳುನಾಡಿನಲ್ಲಿ ವೇಣೂರಿನ ಅರಸನ ಹೆಸರು ತನಗಿಂತ ಹೆಚ್ಚಾಗುತ್ತದೆ ಎಂದು ಅರಿತ ಕಾರ್ಕಳದ ಭೈರವ ಅರಸ ಕೂಡಲೇ ಕಾರ್ಯತಪ್ತನಾಗಿದ್ದ. ಬಾಹುಬಲಿ ಮೂರ್ತಿಯನ್ನು ಕೆತ್ತಿಸುತ್ತೇನೆ ಎಂದು ಹೇಳಿಕೊಂಡು ಬಂದಿದ್ದು ವೇಣೂರಿನ ತಿಮ್ಮಣ್ಣ ಅಜಿಲರು ಆದರೆ ಮೂರ್ತಿ ಕೆತ್ತಿ ಪ್ರತಿಸ್ಥಾಪನೆ ಮಾಡಿದ್ದು ಕಾರ್ಕಳದ ಅರಸ. ಇದು ಇವರುಗಳ ಮಧ್ಯೆ ದೊಡ್ಡ ಬಿರುಕನ್ನು ತಂದು ನಿಲ್ಲಿಸುತ್ತದೆ. ಅಷ್ಟೇ ಆಗಿದ್ದರೆ ಅದು ಸಾಮಾನ್ಯವಾಗಿತ್ತು. ಪ್ರತಿಸ್ಥಾಪನೆಗೆ ಇಡೀ ತುಳುನಾಡಿನ ಜನರನ್ನೇ ಕರೆದ ಭೈರವ ಅರಸ ತನ್ನದೇ ಆದ ಜೈನ ವಂಶದ ಹಿರಿಯನಾದ ತಿಮ್ಮಣ್ಣ ಅಜಿಲರನ್ನು ಆಹ್ವಾನಿಸದೆ ಘೋರ ಅವಮಾನ ಮಾಡಿದ್ದ. ಅಮರ ಶಿಲ್ಪಿ ಬೀರನ ಕೈಯನ್ನು ತುಂಡು ಮಾಡಿದ್ದು ಮುಂದೆ ವೇಣೂರಿನ ಅರಸರು ಬಾಹುಬಲಿ ಕೆತ್ತಿಸಬಾರದು ಅನ್ನುವ ಆಲೋಚನೆಯಿಂದಲೇ ಅನ್ನುವ ಅನುಮಾನ ವೇಣೂರಿನ ಅರಸರ ಮುನಿಸಿಗೆ ಕಾರಣವಾಗುತ್ತದೆ. ಇದು ವೆನೂರು ಮತ್ತು ಕಾರ್ಕಳದ ಅರಸರಲ್ಲಿ ಉದ್ವಿಘ್ನತೆ ಮೂಡಿಸಿ ಪರಸ್ಪರರು ತೊಡೆ ತಟ್ಟುವಂತೆ ಮಾಡಿದ್ದವು.
ತಾನು ಬಾಹುಬಲಿಯ ಮೂರ್ತಿಯನ್ನು ಕೆತ್ತಬೇಕು ಎಂದು ಅದೆಷ್ಟೋ ಸಮಯದಿಂದ ಬಯಕೆಯನ್ನು ಇಟ್ಟುಕೊಂಡಿದ್ದರು. ಆದರೆ ತನ್ನ ಮನದಾಸೆ ಮನದಲ್ಲೇ ಉಳಿದು ಹೋಗಿದ್ದವು. ತನಗೆ ಈ ಜನ್ಮದಲ್ಲಿ ಯೋಗವಿಲ್ಲ ಸೋಲು ಒಪ್ಪಿಕೊಂಡವರಂತೆ ದೀರ್ಘವಾದ ನಿಟ್ಟುಸಿರು ಬಿಡುತ್ತಾರೆ ತಿಮ್ಮಣ್ಣ ಅಜಿಲರು. ತನಗಾದ ಅವಮಾನ ಕರುಳು ಕೊಯ್ಯುತ್ತದೆ. ನಿರಾಸೆ ಕಣ್ಣುಗಳಲ್ಲಿ ನೀರಾಗಿ ಹರಿಯುತ್ತದೆ. ಕಣ್ಣುಗಳಲ್ಲಿ ಉಮ್ಮಳಿಸಿ ಬರುವ ನೀರನ್ನು ಒರಸುತ್ತಾ ಅರಮನೆಯ ಎದುರಿರುವ ಕಂಬುಳದ ಗದ್ದೆಯ ಕಡೆಗೆ ದೃಷ್ಟಿ ನೆಡುತ್ತಾರೆ ತಿಮ್ಮಣ್ಣ ಅಜಿಲರು.
ಅದ್ಯಾರೋ ಕಂಬುಳದ ಕಟ್ಟ ಹುಣಿಯಲ್ಲಿ ಅರಮನೆಗೆ ಬರುವ ದಾರಿಯಲ್ಲಿ, ಏಳುತ್ತಾ ಬೀಳುತ್ತಾ ತೆವಳುತ್ತಾ ಅರಮನೆಯ ಕಡೆಗೆ ಬರುವ ವ್ಯಕ್ತಿ ಅರಸರ ಕಣ್ಣಿಗೆ ಬೀಳುತ್ತಾನೆ. ಸ್ವತಹ ಅರಸರೆ ಓಡೋಡಿ ಬರುತ್ತಾರೆ. ಬಂದವನು ಬೀರ ಕಲ್ಕುಡ ಅನ್ನುವುದನ್ನು ತಿಳಿಯುವುದಕ್ಕೆ ಅರಸರಿಗೆ ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಹಸಿ ಹಸಿ ಗಾಯಗಳನ್ನು ಇಟ್ಟುಕೊಂಡು ದಾರಿ ತುಂಬಾ ರಕ್ತ ಸುರಿಸಿಕೊಂಡು ಬಂದವನು ಬೀರನೇ ಆಗಿದ್ದ.
ಚಿಕ್ಕ ಚಿಕ್ಕ ವಿಷಯಗಳಿಗೂ ಬೆಟ್ಟದಷ್ಟು ಆತಂಕ ಪಡುವ ತಾಯಿ ತನ್ನನ್ನು ಈ ಅವಸ್ಥೆಯಲ್ಲಿ ಕಂಡರೆ ಎದೆ ಒಡೆದು ಸಾಯುತ್ತಾಳೆ. ಇಂಚಿಂಚು ನನ್ನ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಹಿಂಬಾಲಿಸುತ್ತಿದ್ದ ಪ್ರೀತಿಯ ತಂಗಿಗೆ ತನ್ನ ಮುಖವನ್ನು
ತೋರಿಸುವ ಧೈರ್ಯ ಬೀರನಿಗೆ ಇರಲೇ ಇಲ್ಲ. ಸೇಡು ದೇಹದ ಒಳಗೆಲ್ಲ ಕುದಿಯುತ್ತಿದೆ. ತನ್ನ ಸೇಡು ಸಾಕಾರಗೊಳ್ಳಬೇಕಾದರೆ ಅದು ವೇಣೂರಿನಲ್ಲಿ ಮಾತ್ರ ಸಾಧ್ಯ ಅನ್ನುವುದನ್ನು ಬೀರ ಕಲ್ಕುಡ ಮನಗಂಡಿದ್ದ.
ತನ್ನಲ್ಲಿ ಹುದುಗಿಸಿಕೊಂಡ ದುಃಖವನ್ನು ತಡೆಯಲಾಗದೆ ಅತ್ತು ಹೇಳುತ್ತಾನೆ ಬೀರ" ಅರಸರೆ, ತುಳುನಾಡಿನಲ್ಲಿ ಇನ್ನೊಂದು ಬಾಹುಬಲಿ ತಲೆ ಎತ್ತಲೇ ಬೇಕು. ನೀಚನಾದ ಭೈರವ ಅರಸನಿಗೆ ತಕ್ಕ ಪಾಠವನ್ನು ಕಲಿಸಿ ಸೇಡು ತೀರಿಸಿಕೊಳ್ಳುವ ತನಕ ಅನ್ನ ಆಹಾರಗಳನ್ನು ಸೇವಿಸುವುದಿಲ್ಲ. ನಿದ್ರೆಗಳು ಬಾಧಿಸುವುದಿಲ್ಲ. ನಿಮ್ಮ ಅಪ್ಪಣೆಗಾಗಿ ವಿಧೇಯಾನಾಗಿ ಕಾಯುತ್ತೇನೆ"
ತಿಮ್ಮಣ್ಣ ಅಜಿಲರಿಗೆ ಅನುಮಾನಗಳು ಕಾಡುತ್ತವೆ. ಒಂದು ಕೈ ಒಂದು ಕಾಲು ಇಲ್ಲದ ಈತನಿಗೆ ಇಷ್ಟೊಂದು ಸಾಮರ್ಥ್ಯ ಇರಲು ಸಾಧ್ಯವೇ ? " ಮೊದಲು ನಿನಗೆ ನೀನೇ ಸಂತೈಸಿಕೊಳ್ಳುವಿಯಂತೆ, ಉತ್ತಮವಾದ ನಾಟಿ ವೈದ್ಯರು ನಿನ್ನ ಗಾಯಗಳನ್ನು ವಾಸಿ ಮಾಡುವಂತೆ ಆಜ್ಞೆಯನ್ನು ಈಯ್ಯುತ್ತೇನೆ. ಹೋಗಿ ಅರಮನೆಯಲ್ಲಿ ಶುಶ್ರೂಷೆಯನ್ನು ಮಾಡಿ ವಿಶ್ರಾಂತಿ ಪಡೆದು ಕೊ" ಕನಿಕರದಿಂದ ಹೇಳುತ್ತಾರೆ ತಿಮ್ಮಣ್ಣ ಅಜಿಲರು
" ಇಲ್ಲ ನನ್ನ ಗಾಯಗಳು ಆರುವ ಮುನ್ನ ಇನ್ನೊಂದು ಭವ್ಯ ಮೂರ್ತಿ ತಲೆ ಎತ್ತಿ ನಿಲ್ಲಬೇಕು. ನಿಮ್ಮ ಅನುಕಂಪದ ಮಾತಿಗಾಗಲಿ, ಆರೈಕೆಯ ಆಸೆಯಿಂದಾಗಲಿ ಬಂದವನು ನಾನಲ್ಲ. ಅರಸರೆ ನನ್ನ ಕೈ ಕಾಲುಗಳನ್ನು ನಾನು ಕಳೆದು ಕೊಂಡಿರಬಹುದು ಆದರೆ ನಿಜವಾದ ಕಲಾವಿದನ ಕಲೆಯ ಕಲ್ಪನೆ ಆತನ ಹೃದಯದಲ್ಲಿರುತ್ತದೆ. ಮನಸಿನ ಏಕಾಗ್ರತೆ ಕೆಲಸ ಮಾಡುವ ಛಲದಿಂದ ಕಲಾವಿದ ಜನ್ಮ ತಲೆಯುತ್ತನೆಯೇ ಹೊರತು ತನ್ನ ಕೈಯಿಂದ ಅಲ್ಲ. ಕೈ ಇದ್ದ ಮಾತ್ರಕ್ಕೆ ಎಲ್ಲರೂ ಶಿಲ್ಪಿಗಳಾಗಲು ಸಾಧ್ಯವೇ ? ಚಿಂತೆ ಬಿಡಿ ನಿಮ್ಮ ಮನದ ಆಸೆಯನ್ನು ಎಳ್ಳಷ್ಟು ಮೀರದಂತೆ ಭವ್ಯ ಮೂರ್ತಿಯನ್ನು ಕೆತ್ತಿಕೊಡುತ್ತೇನೆ ಅಪ್ಪಣೆ ಮಾಡಿ" ಎನ್ನುತ್ತಾ ವಿನಮ್ರನಾಗಿ ಬೇಡುತ್ತಾನೆ
ವೇಣೂರಿನ ಅರಸರಿಗೂ ಬಾಹುಬಲಿ ಕೆತ್ತಿಸಬೇಕು ಅನ್ನುವ ಅತುಲವಾದ ಆಸೆ ಇದ್ದುದರಿಂದ ಇಲ್ಲವೆಲ್ಲಾಗುವುದಿಲ್ಲ. ಒಂದು ಯೋಗ್ಯ ಶುಭಘಳಿಗೆಯಲ್ಲಿ ಮೂರ್ತಿ ಕೆತ್ತನೆಯ ಕೆಲಸ ಆರಂಭವಾಗುತ್ತದೆ. ತುಳುನಾಡಿನಲ್ಲಿ ಇನ್ನೊಂದು ಬಾಹುಬಲಿಯ ಮೂರ್ತಿ ಜನ್ಮ ತಳೆಯುತ್ತಿದೆ ಅನ್ನುವ ವಿಷಯ ತಿಳಿದ ಕಾರ್ಕಳದ ಭೈರವ ಅರಸ ಕೆನಲಿ ಕೆಂಡವಾಗುತ್ತಾನೆ. ಓಲೆ ಮಾಣಿಯನ್ನು ಕರೆದು ಓಲೆಯೊಂದನ್ನು ವೇಣೂರಿಗೆ ಕಳುಹಿಸುತ್ತಾನೆ " ಕೆತ್ತುತ್ತಿರುವ ಬಾಹುಬಲಿಯ ಮೂರ್ತಿ ಮತ್ತು ಕೆತ್ತುವ ಶಿಲ್ಪಿಯನ್ನು ನನ್ನ ವಶಕ್ಕೆ ಒಪ್ಪಿಸದೆ ಹೋದರೆ ನಿಮ್ಮ ವೇಣೂರಿಗೆ ಮುತ್ತಿಗೆಯನ್ನು ಹಾಕಿ ಮೂರ್ತಿಯನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಹಾಗೊಮ್ಮೆ ಮೂರ್ತಿ ಸಿಗದೇ ಹೋದರೆ ಇಡೀ ವೇಣೂರಿನ ಪೇಟೆಯನ್ನೇ ಸುಟ್ಟು ಬಿಡುತ್ತೇವೆ ಅನ್ನುವುದು ಒಲೆಯ ಒಕ್ಕಣೆಯಾಗಿತ್ತು.
ಕೇಡುಗಾಲ ಬಂದಂತೆ ತಲೆಯ ಮೇಲೆ ಕೈ ಹೊತ್ತು ಕೂರುತ್ತಾರೆ ತಿಮ್ಮಣ್ಣ ಅಜಿಲರು. ಯಾಕೆಂದರೆ ಕಾರ್ಕಳದ ಅರಸರ ಸೈನ್ಯದ ಮುಂದೆ ತಮ್ಮದು ಏನೇನು ಅಲ್ಲ. ಮೇಲಾಗಿ ತಿಮ್ಮಣ್ಣ ಅಜಿಲರಿಗೆ ವ್ರುಧ್ಯಾಪ್ಯದ ವಯಸ್ಸು. ಆದರೆ ತಾನು ಹೇಳಿದಂತೆ ಮಾಡದೆ ಬಿಡುವವನು ಕಾರ್ಕಳದ ಅರಸನಾಗಿರಲಿಲ್ಲ. ಧರ್ಮ ಸಂಕಟದ ಅಗ್ನಿ ಪರೀಕ್ಷೆ ತಿಮ್ಮಣ್ಣ ಅಜಿಲರದಾಗುತ್ತದೆ
 ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ :-6

ಅದೊಮ್ಮೆ ವಿಜಯನಗರದ ಅರಸರು ಜೈನ ಧರ್ಮವನ್ನು ಸ್ವೀಕರಿಸಿ ಎರಡನೇ ಹರಿಹರ ಅನ್ನುವ ಸಾರ್ವಭೌಮ ಶ್ರವಣಬೆಳಗೊಳದ ಬಾಹುಬಲಿಯನ್ನು ಕೆತ್ತಿಸಿದ್ದನು. ಅದು ಜೈನ ಧರ್ಮದ ಉಚ್ರಾಯ ಕಾಲವಾಗಿತ್ತು. ದೊರೆಯೊಬ್ಬ ಜೈನ ಧರ್ಮ ಸ್ವೀಕರಿಸಿದಾಗ ಅವನ ಕೈಕೆಳಗಿನ ಸಾಮಂತರೂ ಜೈನ ಧರ್ಮ ಸ್ವೀಕರಿಸಿ ತಮ್ಮ ನಿಷ್ಠೆ ತೋರಿಸುವ ಕಾಲವಾಗಿತ್ತು ಅದು. ಹೀಗೆ ತುಳುನಾಡಿನ ಅನೇಕ ಬಂಟ ಅರಸರು ಜೈನ ಧರ್ಮವನ್ನು ಸ್ವೀಕರಿಸುತ್ತಾರೆ. ಹೀಗೆ ಮೂಲ ಬಂಟರು ಮತ್ತು ಜೈನ ಧರ್ಮ ಸ್ವೀಕರಿಸಿದವರಿಗೂ ತಿಕ್ಕಾಟಗಳು ಸುರುವಾಗುತ್ತದೆ. ಬಂಟರನ್ನು ಎದುರಿಸಿ ಆಡಳಿತ ನಡೆಸುವುದೂ ಕಷ್ಟವಾದ ಮಾತಾಗಿತ್ತು. ಬಂಟರು ದಂಗೆ ಏಳದಂತೆ ತಡೆಯಲು ಜೈನ ಅರಸರು ತಮ್ಮ ರಾಜ್ಯವನ್ನು ಮಾಗಣೆಗಳಾಗಿ ವಿಂಗಡಿಸಿ, ಹಲವು ಗುತ್ತುಗಳಲ್ಲಿ ಬಲಾಢ್ಯರು ಮತ್ತು ಬಲಿಷ್ಟರೂ ಆದ ನಾಲ್ಕು ಗುತ್ತುಗಳನ್ನು ಸೇನಾನಿಗಳೆಂದು ಗುರುತಿಸಿ ಅರಸರ ನಂತರದ ಪಾರುಪತ್ಯದ ಅಧಿಕಾರವನ್ನು ನೀಡಿ ದಂಗೆ ಏಳುವುದನ್ನು ಉಪಶಮನಗೊಳಿಸುವುದು ಸಾಮಾನ್ಯವಾಗಿತ್ತು.

ಹೀಗೆ ವೇಣೂರಿನ ಅಜಿಲ ಅರಸರ ರಾಜ್ಯಕ್ಕೂ ಹದಿಮೂರು ಮಾಗಣೆಗಳಿದ್ದವು. ಅರವದಗುತ್ತು, ಕಡೆಕಲಗುತ್ತು, ಬೊಳ್ಳೂರುಗುತ್ತು ಮತ್ತು ಪೇರೂರು ಪೆರಿಂಜ ಗುತ್ತು ರಾಜ ಗುತ್ತುಗಳೆಂದು ಶಾಸನ ಬರೆಸಿಕೊಂಡಿದ್ದವು. ವೇಣೂರಿನ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಸಂಗತಿಗೂ ಹೆಗಲು ಕೊಡಲು ಈ ನಾಲ್ಕು ಸೇನಾನಿ ಗುತ್ತುಗಳು
ಕಟಿಬದ್ಧವಾಗಿರಬೇಕಾಗಿತ್ತು.

ಕಾರ್ಕಳದ ಭೈರವ ಅರಸ ಗುಣದಲ್ಲಿ ಮಹಾ ನೀಚ ಬುದ್ಧಿಯವಾನಾಗಿದ್ದು , ವೇಣೂರಿನಲ್ಲಿ ಬಾಹುಬಲಿ ಕೆತ್ತಿಸುತ್ತಿದ್ದಾರೆ ಅನ್ನುವುದನ್ನು ಅರಗಿಸಿ ಕೊಳ್ಳಲಾಗದೆ ವೇಣೂರಿನ ಕಡೆಗೆ ತನ್ನ ಸೈನ್ಯ ಕಟ್ಟಿಕೊಂಡು ಬಾಹುಬಲಿಯನ್ನು ಕುಟ್ಟಿ ಕೆಡಹಲು ಅಸೂಯೆಯಿಂದ ದಾಳಿ ಇಡುತ್ತಾನೆ. ಎಲ್ಲದರಲ್ಲೂ ಒಂದು ಕೈ ಮೇಲಾದ ಕಾರ್ಕಳದ ಅರಸರನ್ನು ಗೆಲ್ಲುವುದು ವೃದ್ಧರಾದ ತಿಮ್ಮಣ್ಣ ಅಜಿಲರಿಗೆ ಅಸಾಧ್ಯವಾದ ಮಾತಾಗಿತ್ತು. ಆದರೆ ತಡೆಯದೆ ಹೋದರೆ ಭೈರವ ಅರಸನ ಆಳುಗಳು ವೇಣೂರನ್ನು ಸುಟ್ಟು ಬಿಡುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಭೈರವ ಅರಸನನ್ನು ಮೆಟ್ಟಿ ನಿಲ್ಲುವ ಒಬ್ಬ ಸೇನಾನಿಯ ಅಗತ್ಯ ವೇಣೂರಿನ ಅರಸರಿಗಾಗುತ್ತದೆ.
ತಡ ಮಾಡುವುದಿಲ್ಲ ತಿಮ್ಮಣ್ಣ ಅಜಿಲರು. ಅಂದಿನ ತುಳುನಾಡಿನಲ್ಲಿ ಅನೇಕ ದಂಡುಗಳನ್ನು ಗೆದ್ದು "ಬಿರ್ದುದಬಂಟೇ" ಎಂದು ಬಿರುದ ಪಡೆದ ದೇವು ಪೂಂಜನ ಮಾವನಾದ ಕಡೆಕಲ ಗುತ್ತಿನ ಕಾಂತಣ್ಣ ಅಧಿಕಾರಿಯು ನೆನಪಿಗೆ ಬರುತ್ತಾರೆ. ಅಂದಿನ ಕಾಲದಲ್ಲಿ ಅನೇಕ ದಂಡುಗಳನ್ನು ಗೆದ್ದು ತನ್ನ ಕೈ ಮತ್ತು ಕಾಲಿಗೆ ಲೆಕ್ಕವಿಲ್ಲದಷ್ಟು ಕಡಗ ತೊಡಿಸಿಕೊಂಡಿದ್ದರು. ನೀಚನಾದ ಭೈರವ ಅರಸನನ್ನು ಸಮರ್ಥವಾಗಿ ಎದುರಿಸಲು, ತೊಡೆ ತಟ್ಟಿ ಯುದ್ಧಕ್ಕೆ ಕರೆಯಲು ಇವೆರೇ ಸಮರ್ಥರು ಎಂದು ಅರಿತ ತಿಮ್ಮಣ್ಣ ಅಜಿಲರು ರಾತೋ ರಾತ್ರಿ ಕಾಂತಣ್ಣ ಅಧಿಕಾರಿಗೆ ಓಲೆಯೊಂದನ್ನು ಬರೆದು ಕಳುಹಿಸುತ್ತಾರೆ

ಶ್ರೀಯುತ ಕಾಂತಣ್ಣ ಅಧಿಕಾರಿಗೆ,
ವೇಣೂರಿನ ಅರಸರಾದ ತಿಮ್ಮನ ಅಜಿಲರು ಮಾಡುವ ಪ್ರಣಾಮಗಳು. ತುರಾತುರಿಯಲ್ಲಿ ಓಲೆ ಬರೆಯುವ ಉದ್ದೇಶವೆಂದರೆ ಬಾಹುಬಲಿಯನ್ನು ಕೆತ್ತುವ ವಿಚಾರದಲ್ಲಿ ವೇಣೂರಿನ ಮತ್ತು ಕಾರ್ಕಳದ ಅರಸರು ತೊಡೆ ತಟ್ಟಿ ನಿಲ್ಲುವಂತೆ ಮಾಡಿವೆ. ಹೇಳುವುದಕ್ಕೆ ಜೈನ ಅರಸರೆ ಆದರೂ ನಮಗೆ ನಮ್ಮದೇ ಆದ ಗಡಿ ರೆಖೆಗಳಿವೆ. ನೀತಿ ನಿಯಮಗಳಿವೆ. ಅಹಿಂಸಪರರಾಗಿದ್ದ ಜೈನ ಅರಸರು ಯುದ್ಧ ಮಾಡುವುದಿಲ್ಲ ಅನ್ನುವುದನ್ನು ಅರಿತ ವಿಜಯನಗರದ ಅರಸರು ಒಬ್ಬರು ಇನ್ನೊಬ್ಬರನ್ನು ಹೇಗೆ ಗೌರವಿಸಿಕೊಂಡು ನಡೆಯತಕ್ಕದು ಅನ್ನುವುದನ್ನು ಶಾಸನ ಬರೆಸಿದ್ದಾರೆ ಇದರ ಪ್ರಕಾರ ಒಬ್ಬ ಇನ್ನೊಬ್ಬನನ್ನು ಅತಿಕ್ರಮಿಸುವಂತಿಲ್ಲ. ಆದರೆ ನಾವು ಬಾಹುಬಲಿಯನ್ನು ಕೆತ್ತಿಸುತ್ತವೆ ಅನ್ನುವುದನ್ನು ಅರಿತ ಭೈರವ ಅರಸ ವೇನೂರನ್ನು ಅತಿಕ್ರಮಿಸುವುದಕ್ಕೆ ತನ್ನ ಸೈನ್ಯವನ್ನು ಕಟ್ಟಿಕೊಂಡು ಬರುತ್ತಿದ್ದಾನೆ.ಆತನ ಮೂಲ ಉದ್ದೇಶ ಬಾಹುಬಲಿಯನ್ನು ಕುಟ್ಟಿ ಕೆಡಹುವುದಾಗಿರುವುದರಿಂದ ಬಾಹುಬಲಿ ಮೂರ್ತಿಯನ್ನು ಶಾಂಬವಿ ನದಿಯ ಹೊಯಿಗೆಯ ದಿಡ್ಡಿನಲ್ಲಿ ಹೂತು ಇಟ್ಟಿದ್ದೇವೆ. ಮೂರ್ತಿಯನ್ನು ಕಾಣದೆ ಹೋದ ಭೈರವ ಅರಸ ವೇಣೂರು ಪೇಟೆಯನ್ನು ಲೂಟಿಗಯ್ಯುವುದು ನಿಶ್ಚಯವಾಗಿದೆ. ವೇಣೂರಿಗೆ ಬಂದ ಗಂಡಾಂತರವನ್ನು ತಪ್ಪಿಸಲು ವೇಣೂರಿನ ವೀರ ಸೇನಾನಿಯಾದ ನಿಮ್ಮಿಂದ ಮಾತ್ರ ಸಾಧ್ಯ ಅನ್ನುವುದು ಇಡೀ ತುಳುನಾಡು ತಿಳಿದ ವಿಚಾರವಾಗಿದೆ. ಬಂಟನಾದ ನಿಮ್ಮಿಂದ ಮಾತ್ರ ಕಾರ್ಕಳದ ಅರಸನ ಅತಿಕ್ರಮಣವನ್ನು ಮೆಟ್ಟಿ ನಿಲ್ಲಲು ಸಾಧ್ಯ ಅನ್ನ್ನುವುದನ್ನು ಅರಿತು, ನಿಮ್ಮ ಸಹಾಯದ ಅಭಿಲಾಶಿಯಾಗಿ ಈ ಒಲೆಯನ್ನು ಬರೆದಿದ್ದೇನೆ. ಯೋಗ್ಯ ಸಮಯದಲ್ಲಿ ಬಂದು ಬಾಹುಬಲಿಯನ್ನು ಉಳಿಸಿಕೊಟ್ಟು, ವೇಣೂರನ್ನು ರಕ್ಷಿಸಬೇಕು ಎಂದು ಕೇಳಿಕೊಳ್ಳುತ್ತಿರುವ

ನಿಮ್ಮ ವಿಶ್ವಾಸಿ
ತಿಮ್ಮಣ್ಣ ಅಜಿಲರು

ತಿಮ್ಮಣ್ಣ ಅಜಿಲರು ಸಾಧು ಮತ್ತು ಸಜ್ಜನಿಕೆಯ ಗುಣವನ್ನು ಹೊಂದಿದವರಾಗಿದ್ದರಿಂದ ಕಾಂತಣ್ಣ ಅಧಿಕಾರಿ ಕೂಡಲೇ ತಮ್ಮ ದಂಡು ಸಮೇತರಾಗಿ ವೇಣೂರು ಸೇರಿಕೊಳ್ಳುತ್ತಾರೆ. ವೀರ ಬಂಟನಿಗೆ ಸೇನಾನಿ ಪಟ್ಟವನ್ನು ಕಟ್ಟಿದ ತಿಮ್ಮಣ್ಣ ಅಜಿಲರು ತಲೆಯ ಮೇಲೆ ವೇಣೂರಿನ ಪೇಟ ತೊಡಿಸುತ್ತಾರೆ. ಶಲ್ಯವನ್ನು ಹೆಗಲಿಗಿಡುತ್ತಾರೆ. ಪಟ್ಟದ ಕತ್ತಿಯನ್ನು ಕಾಂತಣ್ಣ ಅಧಿಕಾರಿಗೆ ಕೊಟ್ಟು ಯುದ್ಧದಲ್ಲಿ ವಿಜಯಿಯಾಗುವಂತೆ ಹರಸುತ್ತಾರೆ. ಹೀಗೆ ವೇಣೂರಿನ ಬಾಹುಬಲಿಯನ್ನು ಉಳಿಸಲು ಬಂಟನೊಬ್ಬ ರಣಕಲಿಯಾಗಿ ಹೋರಾಡುತ್ತಾನೆ. ವೈರಿಗಳಿಗೆ ಸಿಂಹ ಸ್ವಪ್ನವಾದ ಕಾಂತಣ್ಣ ಅಧಿಕಾರಿಯ ಮುಂದೆ ಕಾರ್ಕಳದ ಭೈರವ ಅರಸನ ಸೈನ್ಯ ದಿಕ್ಕಾಪಾಲಾಗಿ ಓಡುತ್ತದೆ. ಕಾಂತಣ್ಣ ಅಧಿಕಾರಿಯನ್ನು ಎದುರಿಸಲಾಗದೆ ಯುದ್ಧಕಳದಿಂದ ಓಡಿ ಹೋಗುತ್ತಾನೆ ಕಾರ್ಕಳದ ಭೈರವ ಅರಸ

ಕಾರ್ಕಳದ ಬಾಹುಬಲಿ ಪ್ರತಿಷ್ಟಾಪನೆಗೊಂಡು ಹಲವು ಸಮಯವಾದರೂ ಬೀರ ತನ್ನ ಮನೆಗೆ ಮರಳಿ ಬಾರದೆ ಇರುವುದು ಬೀರನ ತಂಗಿ ಮತ್ತು ತಾಯಿಗೆ ಅರಗಿಸಿಕೊಳ್ಳಲಾಗದ ಆತಂಕಕ್ಕೆ ಕಾರಣವಾಗುತ್ತದೆ. ಮೊದ ಮೊದಲು ಕಾರ್ಕಳದ ಭೈರವ ಅರಸ ಕೊಡುವ ಅಪಾರವಾದ ಕಾಣಿಕೆಗಳನ್ನು ಗಾಡಿಯಲ್ಲೇ ಹೇರಿಕೊಂಡು ಬರುತ್ತಾನೆ ಎಂದು ಕನಸು ಕಾಣುತ್ತಿದ್ದ ಕುಟುಂಬ ಈಗ ಬೀರ ಮನೆಗೆ ಬಂದು ಮುಟ್ಟಿದರೆ ಸಾಕು ಎಂದು ಆತಂಕದಿಂದ ಹಂಬಲಿಸುತ್ತಾರೆ. ಅಣ್ಣನಿಗಾಗಿ ಹಂಬಲಿಸುವ ಕಾಳಮ್ಮಳಿಗೆ ಅಳುವೇ ನಿತ್ಯವಾಗುತ್ತದೆ. ತನ್ನ ಅಣ್ಣನಿಗೆ ಏನೋ ಆಗಿದೆ ಎಂದು ಒಳ ಮನಸ್ಸು ಅನುಮಾನದ ಬೇಗುದಿಯಿಂದ ಕುದಿಯುತ್ತದೆ. ಅದೊಂದು ದಿನ ಮುಂಜಾವಿನ ಮೂರು ಘಳಿಗೆಯ ಹೊತ್ತು. ಕಾಳಮ್ಮನ ಕನಸು ಅಪಸಕುನದ ರೂಪ ತಾಳಿಕೊಂಡಿತ್ತು!!. ತನ್ನ ಅಣ್ಣನನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದ ಎಳೆಯ ಪ್ರಾಯದ ಕಾಳಮ್ಮ ದಢಕ್ಕನೆ ಎದ್ದು ಕೂರುತ್ತಾಳೆ 
 ಕಲ್ಲುಟ್ಟಿ ಮತ್ತು ಕಲ್ಕುಡ ಕಥೆ :-7

ಮುಂಜಾವಿನ ಕನಸು ಸತ್ಯವಾಗುತ್ತದೆ ಅನ್ನುವುದನ್ನು ಕಾಳಮ್ಮ ಕೇಳಿ ತಿಳಿದಿದ್ದಳು. ತನ್ನ ಪ್ರೀತಿಯ ಅಣ್ಣ ಚಿದ್ರ ದೇಹಿಯಾಗಿ ಒಸರುವ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಂತೆ, ಕೈ ಕಾಲು ಕಳೆದುಕೊಂಡು ಸಹಾಯಕ್ಕಾಗಿ ಅಡಿಗಡಿಗೂ ಅಂಗಲಾಚುತ್ತಾ ಅಳುವಂತೆ, ನಂಬಿಸಿದವರೇ ಮೋಸ ಮಾಡಿದರು ಎನ್ನುತ್ತಾ, ತನ್ನ ಪ್ರೀತಿಯ ತಂಗಿಯನ್ನು ಸಹಾಯಕ್ಕೆ ಕರೆದಂತೆ ಆರ್ತನಾದದ ಮೊರೆಯನ್ನು ಕೇಳಲಾಗದೆ ದಡಕ್ಕನೆ ಎದ್ದು ಕೂರುತ್ತಾಳೆ
ಕಾಳಮ್ಮ. ಆಲೋಚಿಸಿದಷ್ಟೂ ಆತಂಕ ಹೆಚ್ಚಾಗುತ್ತದೆ. ಅಣ್ಣನಿಗೆ ಏನೋ ಆಗಿದೆ ಅನ್ನುವ ತನ್ನ ಅನಿಸಿಕೆಗೆಗಳಿಗೆ ಇಂಬು ನೀಡಿದೆ ಕನಸು.

ಬೆಳಕು ಹರಿಯುತ್ತಿದ್ದಂತೆ ತಾಯಿಯಲ್ಲಿ ಆಶೀರ್ವಾದ ಬೇಡಿ ಅಣ್ಣನನ್ನು ಕಾಣಲು ಕಾರ್ಕಳದತ್ತ ಕಾಲು ಹಾಕುತ್ತಾಳೆ ಕಾಳಮ್ಮ. ಕಾಡು ದಾರಿಯಲ್ಲಿ ಒಬ್ಬಳೇ ನಡೆಯುವಾಗ ಕಾಡ ಕುಡಿಯನೊಬ್ಬ ಕಾಳಮ್ಮನ ಮೇಲೆ ಏರಿ ಬರುತ್ತಾನೆ. ರಕ್ಷಣೆಗಾಗಿ ಕಾಳಮ್ಮ ಕೂಗಿಕೊಂಡಾಗ ಕಾಡ ರೋಧನವಾಗದೆ ನಾಗ ದೇವರೇ ಬಂದು ಕಾಲಮ್ಮನ್ನನ್ನು ಕಾಪಾಡುತ್ತಾರೆ. ತನ್ನನ್ನು ರಕ್ಷಣೆ ಮಾಡಿದ ನಾಗ ದೇವರಿಗೆ ವಂದಿಸಿ ತುರಾತುರಿಯಲ್ಲಿ ಕಾರ್ಕಳದ ಕಡೆಗೆ ನಡೆಯುತ್ತಾಳೆ. ಆದರೆ ಕಾರ್ಕಳದಲ್ಲಿ ಜನ ಬೀರನಿಗಾದ ಅವಸ್ಥೆಯನ್ನು ಹೇಳಿ ಆತ ವೇಣೂರಿನಲ್ಲಿ ಬಾಹುಬಲಿ ಕೆತ್ತುತ್ತಿರುವ ಬಗ್ಗೆ ಹೇಳುತ್ತಾರೆ.

ವೇಣೂರಿಗೆ ಬಂದು ನೋಡಿದಾಗ ತನ್ನ ಅಣ್ಣ ಒಂದು ಕೈ ಮತ್ತು ಒಂದು ಕಾಲಿಂದ ಬಾಹುಬಲಿಯ ಮೂರ್ತಿಯನ್ನು ರಾತ್ರಿ ಹಗಲು ಕೆತ್ತುತ್ತಿರುವುದು ತಿಳಿಯುತ್ತದೆ. ಅಣ್ಣನಿಗಾದ ಅನ್ಯಾಯ ಕಂಡು ಕಾಳಮ್ಮ ಕೋಪದಿಂದ ರಣಚಂಡಿಯಾಗುತ್ತಾಳೆ. ಕಾರ್ಕಳದ ಭೈರವ ಅರಸನನ್ನು ಶಿಕ್ಷಿಯೇ ಶಿಕ್ಷಿಸುತ್ತೇನೆ ಎನ್ನುತ್ತಾ ಕೆನಲಿ ಕೆಂಡವಾಗುತ್ತಾಳೆ. ಆದರೆ ಬೀರ 'ನಾವು ಬಡವರಾಗಿ ಹುಟ್ಟಿದ್ದೇ ತಪ್ಪು ಇನ್ನು ಕಾರ್ಕಳದ ಅರಸ ಕೊಟ್ಟ ಶಿಕ್ಷೆಯನ್ನು ಪ್ರಶ್ನಿಸುವುದು ನಮ್ಮಿಂದ ಸಾಧ್ಯವಿಲ್ಲದಾಗ ಆತನನ್ನು ಶಿಕ್ಷಿಸಲು ಸಾಧ್ಯವೇ ?' ತಂಗಿ ತಾವು ಸಾಮಾನ್ಯ ಮನುಷ್ಯರಲ್ಲ ದೇವಶಿಲ್ಪಿಗಳು ದೇವಸಭೆಯಲ್ಲಿ ಬ್ರಹಸ್ಪತಿಯನ್ನು ಅವಮಾನಿಸಿದ್ದಕ್ಕೆ ನಾವು ಮಾನವರಾಗಿ ಹುಟ್ಟುವಂತೆ ಶಾಪ ಪಡೆದಿದ್ದೇವೆ ಅನ್ನುವುದನ್ನು ನೆನಪಿಸುತ್ತಾಳೆ ಕಾಳಮ್ಮ. ಬೀರ ಕಲ್ಕುಡನಿಗೆ ತಮ್ಮ ನಿಜ ಜನ್ಮದ ನೆನಪಾಗುತ್ತದೆ. ತಿಮ್ಮಣ್ಣ ಅಜಿಲರಿಗೆ ಮಾಡಿ ಕೊಡುತ್ತೇನೆ ಎಂದು ಒಪ್ಪಿಕೊಂಡ ಕೆಲಸವನ್ನು ಮಾಯೆಯಿಂದ ಮಾಡಿ ಮುಗಿಸುತ್ತಾರೆ.

ಬೆಳಕು ಹರಿಯುವ ಮುನ್ನ ವೇಣೂರು ಶ್ರೀ ಮಹಾಲಿಂಗೇಶ್ವರ ಸನ್ನಿದಾನಕ್ಕೆ ಬಂದು ಬೇಕುಬೇಕಾದ ಹರಕೆಗಳನ್ನು ಒಪ್ಪಿಸುತ್ತಾರೆ. ಈಶ್ವರನನ್ನು ಭಕ್ತಿಯಿಂದ ಭಜಿಸಿ ತೀರ್ಥ ಬಾವಿಗೆ ಹಾರುತ್ತಾರೆ. ಕಾಯ ಅಳಿಯುತ್ತದೆ ಮಾಯೆ ಉಳಿಯುತ್ತದೆ. ಉದಿಸಿದ ಮಾಯೆಗಳನ್ನು ಮಹಾದೇವ ಹರಸಿ ತುಳುನಾಡಿನಲ್ಲಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಪೊರೆಯುವ ಕಾರಣಿಕದ ಭೂತಗಳಾಗುವಂತೆ ಹರಸುತ್ತಾನೆ. ಶಿವನಿಂದ ಆಶೀರ್ವಾದ ಪಡೆದ ಧೈವಗಳು ದೃಷ್ಟಿ ಕಾರ್ಕಳದ ಕಡೆಗೆ ದೃಷ್ಟಿ ನೆಡುತ್ತವೆ. ಸುಟ್ಟು ಬೂದಿಯಾಗುತ್ತದೆ ಕಾರ್ಕಳದ ಅರಮನೆ. ನಾನ ಉಪದ್ರಗಳಿಂದ ಅರಸ ಹುಚ್ಚನಾಗುತ್ತಾನೆ ಅನ್ನುತ್ತವೆ ತುಳುನಾಡಿನ ಕಥೆಗಳು

ಹೀಗೆ ಮುಂದೆ ಈ ಅಣ್ಣ-ತಂಗಿ ನೊಂದವರಿಗೆ ರಕ್ಷಕರಾಗಿ, ನೋಯಿಸಿದವರಿಗೆ ಶಿಕ್ಷಕರಾಗಿ, ತಪ್ಪು ಮಾಡುವವರಿಗೆ ಉಗ್ರರೂಪಿಗಳಾಗಿ ಸತ್ಯದೇವತೆಗಳಾಗಿ, ಧರ್ಮದೇವತೆಗಳಾಗಿ ತುಳುನಾಡಿನುದ್ದಕ್ಕೂ ಕಾರಣೀಕ ಶಕ್ತಿಗಳಾಗಿ ನೆಲೆಯಾಗುತ್ತಾರೆ. ಹೀಗೆ ‘ಬೀರೆ’ ಯು ‘ಶ್ರೀ ವೀರ ಕಲ್ಲುಕಟ್ಟಿಕ, ಕಲ್ಕುಡ, ಪಾಷಾಣಮೂರ್ತಿ’ ಯಾಗಿ ತುಳುವನಾಡಿನ ಉದ್ದಕ್ಕೂ ಹಾಗೂ ಕೆಲ ಬೇರೆ ಪ್ರದೆಶದಲ್ಲು ಪೂಜೆ-ಪುನಸ್ಕಾರಗಳನ್ನು ಪಡೆಯುತ್ತಾ, ಸೋದರಿ ‘ಕಾಳಮ್ಮ’ , ‘ಶ್ರೀ ಕಲ್ಲುರುಟ್ಟಿ, ಕಲ್ಲುರ್ಟಿ, ವರ್ತೆ, ಮಂತ್ರದೇವತೆ, ಸತ್ಯದೇವತೆ’ ಎಂಬೀ ಮುಂತಾದ ನಾಮದಿಂದ ಕರೆಸಿಕೊಳ್ಳುತ್ತಾ ನಾಡಿನೆಲ್ಲೆಡೆ ತನ್ನ ಮಕ್ಕಳನ್ನು ಪೊರೆದು ಕಾಯುವ ಭಾರವನ್ನು ಹೊತ್ತಿದ್ದಾಳೆ. ತುಳು ದೈವದ ನುಡಿಯ ಒಂದು ಸಾಲಿನಂತೆ ಅಮ್ಮ ‘ಕಲ್ಲುರ್ಟಿ’ ಯು “ಸತ್ಯೋಗು ಸತ್ಯದೇವತೆಯಾದ್, ಧರ್ಮಗು ಧರ್ಮದೇವತೆಯಾದ್, ಕೃತಿಮೋಗು ಕೃತಿಮದೇವತೆಯಾದ್, ಕಪಟೊಗು ಪಾಷಾಣಮೂರ್ತಿ ಕಲ್ಲುರ್ಟಿ ಅಪ್ಪೆಯಾದ್’ ಮಾತೆರ್ನಲಾ ಕಾಪೊಂದ್ ಉಲ್ಲೊಲ್” ಎಂಬುದಾಗಿ ಅಮ್ಮ ಕಲ್ಲುರ್ಟಿಯ ಮಹಿಮೆಯನ್ನು ಸಾರಲಾಗಿದೆ.
ಹೀಗೆ ‘ಕಲ್ಕುಡ-ಕಲ್ಲುರ್ಟಿ’ ಯರು ಕೆಲವೆಡೆ ಪ್ರದಾನ ದೈವವಾಗಿ, ಕೆಲವೆಡೆ ಪರಿವಾರ ಶಕ್ತಿಗಳಾಗಿ ನೆಲೆಯಾಗಿ ಭಕ್ತರ ಪೊರೆದು ಕಾಯುತ್ತಿದ್ದಾರೆ. ಕಲ್ಕುಡನು ಮಂದರ್ತಿ, ನೀಲಾವರ ಹಾಗೂ ಇನ್ನಿತರ ಕ್ಷೇತ್ರದಲ್ಲಿ ದುರ್ಗೆಯ ಮಗನಾಗಿ ನೆಲೆನಿಂತು ಕ್ಷೇತ್ರ ರಕ್ಷಣೆಯ ಭಾರವನ್ನ ಹೊತ್ತಿದ್ದಾನೆ. ಅಂತೆಯೇ ಶಂಕರನಾರಾಣ(Shankaranarayana)ದಲ್ಲಿ “ಶ್ರೀ ವೀರ ಕಲ್ಲುಕುಟಿಕ’ ನಾಗಿ ನೆಲೆಸಿ ಭಕ್ತರ ಸಕಲವಾದ ನೋವನ್ನು ನೀವಾರಣೆ ಮಾಡುತ್ತಾ ಭಕ್ತರ ಹುಯಿಲು(ದೂರು) ಸ್ವೀಕರಿಸಿ ಅದನ್ನು ಪರಿಹರಿಸಿ ಕೊಡುವ ಕಾರ್ಯವನ್ನು ಮಾಡುತ್ತಾ ಇದ್ದಾನೆ. ಅಂತೆಯೇ ಕಲ್ಲುರ್ಟಿಯು ತುಳುನಾಡಿನಿದ್ದಕ್ಕೂ ಮಂತ್ರದೇವತೆ, ಸತ್ಯದೇವತೆ, ವರ್ತೆ, ಪಾಷಾಣಮೂರ್ತಿ ಅಪ್ಪೆಯಾಗಿ ನೆಲೆಸಿ ಭಕ್ತರ ಪುರೆವ ಕಾಯಕದಲ್ಲಿ ತೊಡಗಿದ್ದಾಳೆ. ಅಂತೆಲೇ ಬಂಟ್ವಾಳ ತಾಲೂಕಿನ ‘ಪಣೋಲಿಬೈಲಿ(Panolibail)’ ನಲ್ಲಿ ನಲೆನಿಂತು ಕಾರಣೀಕ ಶಕ್ತಿಯಾಗಿ ನೆಲೆಸಿದ್ದಾಳೆ. ‘ಕಲ್ಕುಡ-ಕಲ್ಲುರ್ಟಿ’ ಗೆ ರಕ್ತಬಲಿಯನ್ನು ನೀಡುವ ಪದ್ದತಿಯಿದೆ. ಇರ್ವರೂ ರಕ್ತಪ್ರೀಯರಾಗಿದ್ದು ಇವರಿಗೆ ಕೋಳಿ, ಕುರಿಯನ್ನು ಬಲಿ ಕೊಡುತ್ತಾರೆ. ನಮ್ಮೇಲ್ಲರ ಕಾಯ್ವ ಕಾರಣೀಕದ ‘ಕಲ್ಕುಡ-ಕಲ್ಲುರ್ಟಿ’ ಗೆ ಇದೋ ಸಾವಿರ ನಮನಗಳು. ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ
     ✍ *ಚ೦ದ್ರಕಾ೦ತ್ ಶೆಟ್ಟಿ ಕಾರಿ೦ಜ*
Share on :

SUDDI

 

Copyright © 2011 Tuluworld - All Rights Reserved