Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಕುಟುಂಬದ ಮನೆ

ಬರವು..ಚಂದು

ತುಳುನಾಡಿನಲ್ಲಿ ಕುಟುಂಬದ ಮನೆ ಇಲ್ಲದ ಊರು ಇಲ್ಲ.ಕುಟುಂಬದ ಮನೆ ಇಲ್ಲದ ವ್ಯಕ್ತಿ ಇಲ್ಲ.
ಒಬ್ಬ ಮನುಷ್ಯನ ಹುಟ್ಟು ಮತ್ತು ಸಾವಿನಿಂದ ಹಿಡಿದು ಕೌಟುಂಬಿಕವಾಗಿ ಎಲ್ಲಾ ಕಾರ್ಯಗಳಿಗೆ ಈ "ಕುಟುಂಬದ ಮನೆ" ಎಂಬುವುದು ಅವಶ್ಯಕ ಬೇಕು.ಒಂದೊಮ್ಮೆ ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ವಿಚಾರ ಬಂದಾಗಲೂ ಅವಳು ಯಾವ ಮನೆತನದ ಹೆಣ್ಣು ಎಂದು ಚರ್ಚಿಸುವವರೂ ಇದ್ದಾರೆ.ಕಡುಬಡವನಿಂದ ಹಿಡಿದು ಆಗರ್ಭ ಶ್ರೀಮಂತ ಕೂಡ ವರ್ಷದಲ್ಲಿ ಒಂದು ದಿನ ತನ್ನ ಕುಟುಂಬದ ಮನೆಗೆ ಹೋಗಲು ಹಾತೊರೆಯುತ್ತಾನೆ.ಅಂತಹ ಶಕ್ತಿ ಕುಟುಂಬದ ಮನೆಗೆ ಇದೆ.ಕುಟುಂಬದ ಮನೆಗೆ ಹೋಗುವುದಿಲ್ಲ ಎಂದು ಹಠಮಾಡಿ ಕುಳಿತವರನ್ನು ಕೂಡ ರಾತ್ರೊ ರಾತ್ರಿ ಎಬ್ಬಿಸಿಕೊಂಡು ಕರ್ಕೊಂಡು ಹೋದ ಉದಾಹರಣೆ ಕೂಡ ನಮ್ಮಲ್ಲಿ ಇದೆ.
ಈ ನಾಡಿನಲ್ಲಿ ಎಲ್ಲಾ ಜಾತಿ ಸಮುದಾಯಕ್ಕೂ ಜಾತಿರೀವಾಜಿನಂತೆ ಇಂತಹುದೇ ಆದಂತಹ ಕುಟುಂಬದ ಮನೆಗಳು ಇವೆ.ಉದಾಹರಣೆಗೆ ಬೂಡು,ಜನಾನಂದ ಮನೆ, ತಳಮನೆ,ಕಟ್ಟಮನೆ,ಬಾರೀಕೆಗಳು,ಗುತ್ತುಗಳು,ಗುರಿಕಾರ ಮನೆ,ಗರಡಿ ಮನೆಗಳು,
ಭಂಡಾರ ಮನೆಗಳು, ಬೊಂಟ್ರಮನೆಗಳು,ಲೆಪ್ಪುದ ಮನೆಗಳು,
ಮಡಸಾನದ ಮನೆಗಳು,ಶುದ್ದ ಮೂಡಣಬಾಗಿಲಿನ ಮನೆಗಳು ಇವೆಲ್ಲಾ ತುಳುನಾಡಿನ ಅಂದಿನ ಕಾಲದಲ್ಲಿ ಗತವೈಭವ ಮೆರೆದ ಮನೆಗಳು.
ಅಣ್ಣ ತಮ್ಮಂದಿರ,ಅಕ್ಕ ತಂಗಿಯಂದಿರ,ಗಂಡ ಹೆಂಡತಿಯ ಎಂಥಹ ಗಲಾಟೆ ಅಂತಃ ಕಲಹ ಇದ್ದರೂ ಅಜ್ಜ,ಮಾವಂದಿರು ಕರೆದು ಪಂಚಾಯಿತಿ ಮಾಡಿ ಸರಿ ಮಾಡಿ ಕಳುಹಿಸಿದ ಮನೆ ಅದು.
ಎಷ್ಟೋ ಕುಟುಂಬದ ಮಕ್ಕಳು ಶಾಲೆಗೆ ಅಲ್ಲಿಂದಲೇ ಹೋಗಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಹಕಾರಿಯಾದ ಮನೆ ಅದು.
ಅಗಿನ ಕಾಲದಲ್ಲಿ ಗ್ರಾಮದಲ್ಲಿ ಗುತ್ತು,ಬಾರೀಕೆ,ಬೂಡಿನ ಅಧಿಕಾರ ಹಿಡಿದ ಈ ಮನೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕುಟುಂಬದ ಮನೆಗಳಾಗಿ ಪರಿವರ್ತನೆಗೊಂಡಿದೆ.
ಹಿರಿಯರಿಂದ ಬಳುವಳಿಯಾಗಿ ಬಂದ ಮೂಲವರ್ಗದ ಭೂಮಿ,ಯಾವುದೊ ಮಹತ್ಕಾರ್ಯಕ್ಕೆ ಅರಸರಿಂದ,
ಉಂಬಲಿಯಾಗಿ ಸಿಕ್ಕ ಭೂಮಿ,
ಅಂತಃಕಲಹದಲ್ಲಿ
ಮತ್ತೊಬ್ಬರ ಕೈಯಿಂದ ನಮಗೆ ದಕ್ಕಿದ ಭೂಮಿ,ಹಣ ಕೊಟ್ಟು ಖರೀದಿ ಮಾಡಿದ ಭೂಮಿ,ಒಕ್ಕಲುತನದಲ್ಲಿ ಸಿಕ್ಕಿದ‌ ಭೂಮಿ‌ ಈ ರೀತಿಯಲ್ಲಿ ಹಿಂದೆ ಸಿಕ್ಕಿದ ಭೂಮಿಗಳು ಮತ್ತು ಅದರಲ್ಲಿದ್ದ ಮನೆಗಳು ಈಗ ಕುಟುಂಬದ ಮನೆಗಳಾಗಿವೆ.ಕುಟುಂಬದ ಮನೆಗಳು ಎಲ್ಲಾವೂ ಬರಿಬಾಂದ್ರದ ಕಟ್ಟುಪಾಡಿನಲ್ಲಿ ಇಂತಹದೇ ಬರಿಯ ಕುಟುಂಬದ ಮನೆ ಎಂದು ರೂಪುಗೊಂಡಿದೆ. ಅದನ್ನು ನಾವು ಇಂತಹ ಜಾತಿಯಲ್ಲಿ ಇಂತಹ ಬರಿಯವರ ಕುಟುಂಬದ ಮನೆ ಎಂದು ನಾವು ಸಂಬೋಧಿಸುತ್ತೆವೆ.
ಕುಟುಂಬದ ಮನೆಗಳಿಗೆ ಜಮ್ಮದ ಇಲ್ಲು,ಕುಟುಂಬದ ಇಲ್ಲು,ಮಡತಾನದ ಇಲ್ಲು ಎಂಬುದರ 
ಜೊತೆಗೆ "ತರವಾಡು ಇಲ್ಲು" ಎಂಬ ಹೊಸದಾಗಿ ಕೇರಳ ಶೈಲಿಯ ಹೆಸರುಗಳಿಂದ ಮತ್ತು ಇತರ ನಾನಾ ಹೆಸರುಗಳಿಂದ ಈಗ ಕರೆಯಲಾಗುತ್ತದೆ.
ಹತ್ತು ಜನ ಸೇರಿದ್ರೆ ಕುಟುಂಬದ ಮನೆ ಆಗುವುದಕ್ಕೆ ಸಾಧ್ಯವಿಲ್ಲ,ಒಂದು ಬರಿಯ,ಒಂದು ಗುಂಪಿನ ಐದಾರು ಕವಳು ಸಮೂಹ ಸೇರಿದ್ರೆ,ಒಂದು ಕುಟುಂಬದ ಮನೆ ಅಗುವುದು.ಒಂದು ವೇಳೆ ಹತ್ತಿಪ್ಪತ್ತು ಜನ ಸೇರಿ ಒಂದು ಕುಟುಂಬದ ಮನೆ ಅಗಿದ್ರೆ,ಅವರ ಮೂಲ ಕುಟುಂಬದ ಮನೆಯೆ ಬೇರೆ ಎಲ್ಲಿಯೊ ಇದೆ ಎನ್ನುವ ಅರ್ಥ ಇದೆ.ಹಾಗೆಂದು ಮಾತ್ರಕ್ಕೆ ಇಲ್ಲವೆಂದಲ್ಲ,ಅಳಿಯ ಕಟ್ಟಿನಲ್ಲಿ ಹೆಣ್ಣು ಸಂತಾನ ಮತ್ತು ಮಕ್ಕಳ್ ಕಟ್ಟಿನಲ್ಲಿ ಗಂಡು ಸಂತಾನ ಕಮ್ಮಿಯಾಗುತ್ತಾ ಬಂದ್ರೆ ಕುಟುಂಬ ನಶಿಸಿ ಹೋಗುತ್ತದೆ.ಆಗ ಕುಟುಂಬವು ಸಣ್ಣದಾಗುತ್ತ ಕೊನೆಗೆ ನಶಿಸಿಯೂ ಹೋಗುತ್ತದೆ.ಉಳಿದರೆ ಹತ್ತಿಪ್ಪತ್ತು ಜನರ ಸಣ್ಣ ಕುಟುಂಬವಾಗಿ ಇರುತ್ತದೆ.
 ಇದಕ್ಕೆ ಇನ್ನೂ ಬೇರೆ ಕಾರಣವೂ ಸಿಗುವುದುಂಟು. ಹಿಂದೆ ತುಲುವರಲ್ಲಿ ಒಂದು ಅನಿಷ್ಟ ಪದ್ದತಿ ಇತ್ತು.ಕೂಡು ಕುಟುಂಬದ ಅ ಕಾಲದಲ್ಲಿ ಮನೆಯ ಯಜಮಾನನಲ್ಲಿ ಕುಟುಂಬದ ಇನ್ನೊಂದು ಕವಳಿನ ಅಂದ್ರೆ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಲ್ಲಿ ಏನಾದರೂ ಆಸ್ತಿ ಕಲಹ,ದೈವಗಳ ವಿಚಾರದಲ್ಲಿ,ಇನ್ನಿತರ ಕೆಲಸಗಳ ವಿಚಾರಗಳಲ್ಲಿ ಜಗಳ ಅಗಿ ಮನೆಯ ಯಜಮಾನ ಕೊನೆಗೆ ಬಿಡುವ ಅಸ್ತ್ರ "ಅರಿವೆ ಪರ್ತ್ ಬುಡ್ಪುನ" ಕ್ರಮ.ಅಂದ್ರೆ ಕುಟುಂಬದಿಂದ ಬಿಟ್ಟು ಬಿಡುವುದು.
ಈ ಅರಿವೆ ಅರಿದು ಬಿಟ್ಟ ಮೇಲೆ ಮತ್ತೆ ಅವರು ಮೂಲ ಕುಟುಂಬ ಸೇರಲು ಅಷ್ಟು ಸುಲಭವಿಲ್ಲ.
ಆಗ ಅವರು ಅನ್ಯಮಾರ್ಗವಿಲ್ಲದೇ ಸ್ವಂತವಾಗಿ ಸ್ವಾತಂತ್ರ್ಯವಾಗಿ ಕುಟುಂಬದ ದೈವಗಳನ್ನು ಬೇರೆ ಎಲ್ಲೊ ಒಂದು ಕಡೆ ಬಂದು ನೆಲೆ ನಿಂತು ನಂಬುತ್ತಾರೆ.ಇಂತಹ ಒಂದು ಸಣ್ಣ ಕುಟುಂಬ ಹುಟ್ಟಿ ಕೊಳ್ಳುತ್ತದೆ.ಮುಂದೆ ಅದರಲ್ಲಿ ಜನಸಂಖ್ಯೆ ಸ್ವಲ್ಪ ಮಟ್ಟಿಗೆ ಜಾಸ್ತಿ ಆಗುತ್ತಾ ಹೋಗುತ್ತದೆ.
ಎರಡು ಮೂರು ತಲೆಮಾರು ಕಳೆದ ನಂತರ ಅ ಕುಟುಂಬದ ಕಿರಿಯರಿಗೆ ತಮ್ಮ ಮೂಲ ಮನೆ,ಮೂಲ ನಾಗ ಎಲ್ಲಿ ಎಂದು ತಿಳಿದಿರುವುದಿಲ್ಲ.ಅವಾಗ ಅವರು ಮೂಲ ಕುಟುಂಬದ ಮನೆಯ ಹುಡುಕಾಟದಲ್ಲಿ ತೊಡಗುತ್ತಾರೆ.
ದೊಡ್ಡದಾದ ಕುಟುಂಬದ ಮನೆ ಬೆಂಕಿಗಾಹುತಿಯಾದಾಗ ಎಷ್ಟೋ ಕುಟುಂಬಗಳು ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ಕಡೆ ದೈವಗಳನ್ನು ನಂಬಿ,ಸಣ್ಣ ಸಣ್ಣ ಕುಟುಂಬಗಳು ಹುಟ್ಟಿಕೊಂಡ ಉದಾಹರಣೆ ಇದೆ.
ಇಂತಹ ಎಷ್ಟೋ ಘಟನೆಗಳು ನಡೆದು ಹೋಗಿವೆ.ಈಗಲೂ ಇಂತಹ ಸಣ್ಣ ಸಣ್ಣ ಕುಟುಂಬದ ಸದಸ್ಯರು ತಮ್ಮ‌ ಮೂಲ ಕುಟುಂಬದ ನಾಗನನ್ನು ಮತ್ತು ಮನೆಯನ್ನು ಹುಡುಕುತ್ತಲೇ ಇದ್ದಾರೆ‌.

ಕುಟುಂಬದ ಮನೆ ಅಂದ ಮೇಲೆ ಅದಕ್ಕೆ ಅದರದೇ ಆದ ಕೆಲವೊಂದು ಶಿಸ್ತು, ನಿಯಮ ನಿಷ್ಠೆ, ಸಂಪ್ರದಾಯಗಳು,ಕಟ್ಟುಪಾಡುಗಳು ಇವೆ.ಅದನ್ನು ಪಾಲಿಸಿಕೊಂಡು ಬಂದರಷ್ಟೆ ಕುಟುಂಬದ ಮನೆಯ ಘನತೆ ಗೌರವ ಪ್ರತಿಷ್ಠೆ ಉಳಿಯುತ್ತದೆ.
ಈ ಭೂಮಿ ಯಾರಿಗೂ ಕೂಡ ಶಾಶ್ವತ ಅಲ್ಲ.
ಒಂದು ಕಾಲದಲ್ಲಿ ಒಬ್ಬರಿಂದ ಒಬ್ಬರು ವಲಸಿಗರಾಗಿ ಒಂದು ಭೂಮಿಯಿಂದ ಇನ್ನೊಂದು ಭೂಮಿಗೆ ಬಂದು ನೆಲೆಯಾಗಿ ಬೇಸಾಯ ಮಾಡುತ್ತ,ಒಕ್ಕಲುತನದಲ್ಲಿ ಜೀವನ ತೇಯ್ದರೆ,ಇನ್ನು ಕೆಲವೊಂದು ಜನರು ಹಣ ಕೊಟ್ಟು‌ ಖರೀದಿ ಮಾಡಿದ ಭೂಮಿ,
ಕೆಲವೊಬ್ಬರು ಧರ್ಪದಿಂದ ಇನ್ನೊಬ್ಬರನ್ನು ಓಡಿಸಿ ವಶಪಡಿಸಿಕೊಂಡು ಕುಳಿತು, ನಂತರ ನಿರ್ಸಂತಾನವಾಗಿ ಬಿಟ್ಟು ಹೋಗಿ, ಬೇರೆ ಕಡೆ ಹೋಗಿ ನೆಲೆಯಾಗಿ, ಅ ಜಾಗಕ್ಕೆ ಮತ್ತೆ ಬೇರೆ
ಕೆಲವೊಂದು ಜನರು ಬಂದು ನೆಲೆಯಾಗುವುದು, 
ಇನ್ನು ಬೇರೆ ಬೇರೆ ಕಾರ್ಯಕ್ಕೆ ಅರಸರಿಂದ, ದೇವಸ್ಥಾನದಿಂದ,ಮಠದಿಂದ,
ಗರಡಿಯಿಂದ ಉಂಬಲಿಯಾಗಿ ಸಿಕ್ಕಿದ ಭೂಮಿಯಲ್ಲಿ ನೆಲೆಗೊಂಡು,
ಕೊನೆಗೊಮ್ಮೆ ಅಲ್ಲಿಯೇ ಶಾಶ್ವತವಾಗಿ‌ ಉಳಿದುಕೊಂಡ ನೆಲ,ಮುಂದಕ್ಕೆ ಗ್ರಾಮದಲ್ಲಿ ಉತ್ತಮ ಹೆಸರು,ಅಂತಸ್ತಿಗೆ ಗಳಿಸಿ ಗುತ್ತು, ಬಾರೀಕೆಗಳಾಗಿ ಮಾರ್ಪಾಡುಗೊಂಡವು.ಇವೇ
ಈಗ ಹೆಚ್ಚಿನವರ ಕುಟುಂಬದ ಮನೆ ಅಗಿದೆ.
ನಾಗನಮೂಲ ಬನ ಎಲ್ಲಿ ಇರುವುದು?
ನಮಗೆ ಮೂಲ ನಾಗ ಎಂಬುದು ನಮ್ಮ ಮೂಲ ಹಿರಿಯರು ನೆಲೆಸಿದ ಆದಿ ಮೂಲ ಜಾಗದಲ್ಲೆ ಇರುವುದು.ಅದು ಬದಲಾಗಲೂ ಸಾದ್ಯವಿಲ್ಲ.
ಈ ಆದಿಮೂಲ ಜಾಗವನ್ನು ಹುಡುಕಲು ಸಾಧ್ಯವೇ ಎಂಬ ಪ್ರಶ್ನೆಗೆ,ಈಚಿನ ಮೂರು ನಾಲ್ಕು ತಲೆಮಾರಿನ ಕುಟುಂಬವಾದರೆ ಹುಡುಕಲು ಸಾದ್ಯ,ಆದರೆ ಐದಾರು ತಲೆಮಾರು ಕಳೆದು ಹೋಗಿ,ಸಂಪರ್ಕ ಕಡಿದು ಹೋದ ಕುಟುಂಬವಾದರೆ ಹುಡುಕುವುದು ತುಂಬಾ ಕಷ್ಟ.ಇಂತಹ ವಿಚಾರಗಳನ್ನು  ಮನಗಂಡು ಕೆಲವೊಂದು ಕಡೆ ಹಿರಿಯರು ತಾವು ನೆಲೆನಿಂತ ಜಾಗದಲ್ಲೆ ಇರುವ ನಾಗಬನವನ್ನು ಕುಟುಂಬದ ನಾಗಬನವಾಗಿ‌ ಪರಿವರ್ತನೆ ಮಾಡಿ ಕೊಂಡಿದ್ದನ್ನು ನಾವು ಕಾಣುತ್ತೆವೆ.ಇನ್ನೂ ಕೆಲವರು ಮೂಲ ಕುಟುಂಬದ ನಾಗಬನ ಸಿಗದೇ ಇದ್ದಾಗ ಅವರದೇ ಬಳಿಯ ಕೆಲವೊಂದು ಮೂಲ ನಾಗಬನಕ್ಕೆ ಹಾಲೆರೆದು ಬರುತ್ತಾರೆ.ಇನ್ನೂ ಕೆಲವರು ನಾಗ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ.
ಆದರೆ ನಮ್ಮ ಮೂಲನಾಗ ಬನಕ್ಕೆ ಸಂದಾಯವಾಗುವ ನಮ್ಮ ತನುತಂಬಿಲ ಸಂದಾಯ ಆಗಲೇಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಕುಟುಂಬದ ನಾಗದೋಷ ನಮಗೆ ಕಾಣುತ್ತಲೇ ಇರುತ್ತದೆ.
ಕುಟುಂಬದ ಮನೆಗಳಲ್ಲಿ ನಾಗನಿಗೆ  ಹೆಚ್ಚಾಗಿ ಎರಡು ಸಲ ಹಾಲೆರೆದು ತಂಬಿಲ ಮಾಡಲಾಗುತ್ತದೆ. ಒಂದು ನಾಗರ ಪಂಚಮಿ ದಿನವಾದರೆ ಇನ್ನೊಂದು ಕಾಲಾವಧಿಯ ದೈವ ದೇವರ ಕಾರ್ಯಕ್ರಮದ ದಿನ.
ನಾಗನಿಗೆ ತನು ತಂಬಿಲ ಸಲ್ಲಿಸದಿದ್ದರೆ ಕುಟುಂಬದ ಕೆಲವರಿಗೆ ಕಣ್ಣುದೃಷ್ಠಿ ಸಂಬಂಧಿಸಿದ ದೋಷಗಳು,ನರಗಳ ದೋಷ, ಮಕ್ಕಳಾಗದೇ ಇರುವುದು,ಚರ್ಮ ಸಂಬಂಧಿಸಿದ ಖಾಯಿಲೆಗಳು,ಮದುವೆಯಾಗದೇ ಉಳಿಯುವುದು,
ಇನ್ನಿತರ ಭಾದೆಗಳು ಗೋಚಾರ ಅಗುತ್ತದೆ. ಅದಕ್ಕಾಗಿ ವರ್ಷಕ್ಕೊಂದು ಸಾರಿ ಕುಟುಂಬದ ನಾಗನಿಗೆ ತನುತಂಬಿಲದ ಸೇವೆ ಪ್ರತಿಯೊಬ್ಬ ಕುಟುಂಬದ ಸದಸ್ಯ ಸಲ್ಲಿಸಿದರೆ ಉತ್ತಮ.ಯಾಕೆಂದರೆ ತುಳುನಾಡು ನಾಗಭೂಮಿ.ಇಲ್ಲಿನ ಮಣ್ಣೆ ನಾಗ.
ಅದಕ್ಕಾಗಿ ಕೆಲವರು ಕೋಪದಿಂದ ಒಂದು ಮಾತು ಹೇಳುತ್ತಾರೆ "ಅಯಗ್ ಮಣ್ಣೆ ಮರಿಯಾದ್ ತುಚ್ಚು" ಎಂದು.

ಕುಟುಂಬದ ಮನೆಯಲ್ಲಿ ಜಾಗದ ದೈವಗಳು ಮತ್ತು ಚಾವಡಿಯ ದೈವಗಳನ್ನು ನಾವು ಕಾಣುತ್ತೆವೆ.
ಯಾವುದು ಇದರಲ್ಲಿ ಜಾಗದ ದೈವಗಳು?
ಇದನ್ನೆ ನಾನು ಈ ಮೊದಲು ಹೇಳಿದ್ದು. ನಮಗಿಂತ ಮುಂಚಿನ ಇನ್ನೊಂದು ಜನಾಂಗ ನೆಲೆ ನಿಂತು,ಅವರು ದೈವಗಳನ್ನು ನಂಬಿ ನಂತ್ರ ಬಿಟ್ಟು ವಲಸೆ ಹೋಗಿದ್ದು,ಅವರು ಬಿಟ್ಟು ಹೋದ ದೈವ,ನಾವು ಅ ಜಾಗದಲ್ಲಿ ಮತ್ತೆ ನೆಲೆ ನಿಂತಾಗ ನಮಗೆ ಅವು ಜಾಗದ ದೈವಗಳ ಹೆಸರಲ್ಲಿ ಬಳುವಳಿಯಾಗಿ ಬಂದದ್ದು.
ಮತ್ತು ಆದಿಯಿಂದಲೇ ಅ ಭೂಮಿಯ ನೆಲಮೂಲದಿಂದ ಬಂದು ನಮಗೆ ನಂಬಲು ಸಿಕ್ಕಂತಹ ಕೆಲವೊಂದು ದೈವೊಗಳು ಮತ್ತು ಕೆಲವೊಂದು ಗ್ರಾಮ ಇಳಿದು ನೇಮ ತೆಗೆದುಕೊಂಡ ದೈವಗಳು.ಉದಾಹರಣೆಗೆ ಹೆಚ್ಚಾಗಿ ಲೆಕ್ಕೆಸಿರಿ,ಮೈಸೊಂದಾಯ,ಜಾಗದ ಗುಳಿಗ,ಜಾಗದ ಪಂಜುರ್ಲಿ,ಪಿಲ್ಚಂಡಿ,ಜುಮಾದಿ,ದೈವೊಂಕ್ಲು ಇಂತಹ ಹಲವು ಜಾಗದ ದೈವಗಳು.ಇದನ್ನು ಕುಟುಂಬದ ದೈವಗಳು ಎಂದು ಪರಿಗಣಿಸಲಾಗುವುದಿಲ್ಲ.ನೆಲಮೂಲದಲ್ಲಿ ಉದಿಪನ ಆದ ದೈವಗಳು ಇವು,ಗ್ರಾಮ ಸಂಬಂಧಿಸಿದ ರಾಜನ್ ದೈವಗಳು,ಗ್ರಾಮ ದೈವಗಳು,ಅರಸು ದೈವಗಳು ಇವು, 
ಆದ ಕಾರಣ ಜಾಗಕ್ಕೆ ಇರುವ ಗೌರವದಲ್ಲಿ  ಕುಟುಂಬದ ಮನೆಯಲ್ಲಿ ಈ ದೈವಗಳಿಗೆ ಮೊದಲ ಪೂಪೂಜನೆ ತಂಬಿಲ ಸೇವೆ ಇವಕ್ಕೆ ನಡೆಯಬೇಕು ಮತ್ತು ನಡೆಯುತ್ತದೆ.ಈ ದೈವಗಳು ನಮ್ಮ ಭೂಮಿಯ ಹೆಸರನ್ನು ಗ್ರಾಮದಲ್ಲಿ,ಮಾಗಣೆಯಲ್ಲಿ ಗುತ್ತು,ಬಾರೀಕೆಯ ಹೆಸರಲ್ಲಿ ಕರೆಸಿ, ಪ್ರಸಿದ್ಧಿ ತಂದು ಕೊಟ್ಟ ದೈವಗಳು.ಆದ್ದರಿಂದ ಕುಟುಂಬದ ಮನೆಯಲ್ಲಿರುವ ಜಾಗದ ಮತ್ತು ಧರ್ಮಚಾವಡಿಯ ದೈವಗಳನ್ನು ಯಾವತ್ತಿಗೂ ಕಡೆಗಣಿಸುವಂತಿಲ್ಲ.ಕುಟುಂಬದ ಕಾರ್ಯಕ್ರಮ ಆಗುವಾಗ ಮೊದಲ ಅರಾಧನೆ ಅ ದೈವಗಳಿಗೆ.ಆನಂತರ ಉಳಿದ ಕುಟುಂಬದ ದೈವಗಳಿಗೆ‌ ಸೇವೆ ಕೊಡುವ ಕ್ರಮ ಇರುವುದು.
ಕುಟುಂಬ ಪದ್ದತಿ ಹೇಗೆ?
ತುಳುನಾಡಿನಲ್ಲಿ ಕುಟುಂಬದ ಪದ್ಧತಿಯಲ್ಲಿ ಎರಡು ವಿಧದಲ್ಲಿ ಇವೆ.
ಆಳಿಯ ಕಟ್ಟು(ಅಪ್ಪೆ ಕಟ್ಟು)
ಮಕ್ಕಳ ಕಟ್ಟು(ಮಗನ ಕಟ್ಟು)
ಇಲ್ಲಿ ಆಳಿಯ ಕಟ್ಟು ಅಂದ್ರೆ ಅಮ್ಮನ ಮೂಲ ಕುಟುಂಬದ ಮನೆಗೆ ಹೋಗುವುದು.ಅಲ್ಲಿಯೆ ಕುಟುಂಬದ ದೈವಗಳನ್ನು ನಂಬುವುದು.
ಮಕ್ಕಳ ಕಟ್ಟು ಎಂದರೆ ತಂದೆಯ ಮೂಲ ಕುಟುಂಬದ ಮನೆ ನಮಗೆ ಕುಟುಂಬದ ಮನೆ ಅಗುವುದು.ತಂದೆಯ ಪಾಲಿನ ಕುಟುಂಬದ ದೈವಗಳು ನಮಗೆ ಕುಟುಂಬದ ದೈವ ಅಗುವುದು.(ಸೂಚನೆ:- ಮೂಲ ನಾಗ ಬೇರೆ ಅಲ್ಲಯೆ ಇರಬಹುದು ಅಥವಾ ಬೇರೆ ಎಲ್ಲಿಯೊ ಇರಬಹುದು)
ಹೆಚ್ಚಾಗಿ ಜೈನ,ಬಿಲ್ಲವ,ಬಂಟ,ಮೂಲ್ಯ, ಮಡಿವಾಳ,ದ್ರಾವಿಡ ಇನ್ನಿತರ ಜನಾಂಗಕ್ಕೆ ಆಳಿಯ ಕಟ್ಟಿನ ಪದ್ದತಿಯಾದರೆ,ವಿಶ್ವಕರ್ಮ, ಗೌಡ,ಕೊಂಕಣಿ,ಬ್ರಾಹ್ಮಣ, ಮೊಗೆರ,ಕುಂಬಾರ ಇನ್ನಿತರ ಸಮುದಾಯಕ್ಕೆ ಮಕ್ಕಳ ಕಟ್ಟು ಪದ್ಧತಿ.

ಕುಟುಂಬದ ಮನೆ ನಮಗೆ ಯಾಕೆ ಅವಶ್ಯಕ?
ಹಿಂದೊಮ್ಮೆ ಕೂಡು ಕುಟುಂಬ ಎಂಬ ಕಟ್ಟು ಪಾಡಿನ ಒಳಗೆ ಎಲ್ಲಾ ಕುಟುಂಬಗಳ ಕವಳುಗಳು ಒಂದೇ ಮನೆಯಲ್ಲಿ ಇತ್ತು.ನೂರು ಜನ ಸದಸ್ಯರು,ಎಂಟು ಹತ್ತು ತೊಟ್ಟಿಲು ಕಟ್ಟಿದ ಮನೆ,ಎಕರೆಗಟ್ಟಲೆ ಗದ್ದೆ ಬೇಸಾಯ ಇದ್ದ ಇಂತಹ  ಪ್ರಸಿದ್ದ ಮನೆಗಳು ಗ್ರಾಮದಲ್ಲಿ ಮೂರು ನಾಲ್ಕು ಮಾತ್ರ ಇದ್ದವು. 
ಮನೆಯಲ್ಲಿ ಹಿರಿಯಜ್ಜಿ  ಇಲ್ಲವೇ ಹಿರಿಯ ಅಮ್ಮ ರಾಜಮಾತೆ ಅ ಮನೆಗೆ.
ಮನೆಯ ಗಂಡುಮಗ ಇಲ್ಲವೇ ಮೊಮ್ಮಗ ಅ ಮನೆಗೆ ಯಜಮಾನನ ಸ್ಥಾನವನ್ನು ಅಲಂಕರಿಸುತ್ತಿದ್ದ.ಉಳಿದವರು ಕೃಷಿ ಬೇಸಾಯ, ಹೈನುಗಾರಿಕೆಯಲ್ಲಿ,ಕೆಲವರು ಕುಲವೃತ್ತಿಯಲ್ಲಿ,ನಾಟಿ ಪಂಡಿತರಾಗಿ,ಮಂತ್ರತಂತ್ರಗಳಲ್ಲಿ ನಿರತರಾಗುತ್ತಿದ್ದರು.ಒಂದೇ ಮನೆಯ ಹಲವು ಕೊಠಡಿಯಲ್ಲಿ ಹಲವಾರು ಸಂಸಾರಗಳು ಅಲ್ಲಿದ್ದವು.ಒಂದೇ ಅಡುಗೆಯ ಮನೆಯಲ್ಲಿ ತಯಾರಾದ ಊಟ ಎಲ್ಲರಿಗು ಬಡಿಸುತ್ತಿದ್ದರು.ಅಲ್ಲಿ ಅಷ್ಟೊಂದು ಅನ್ಯೊನ್ಯತೆ ಇತ್ತು,ನಂಜಿ ಮತ್ಸರ ಒಂದು ಹೊತ್ತು ಬಂದು ಹೊಗುತ್ತಿತ್ತು ಕೂಡ.ಆದರೂ ರಕ್ತಸಂಬಂಧದ ಒಳಗೆ ಅದಕ್ಕೆ ಯಾರು ಕೂಡ ಸೊಪ್ಪು ಹಾಕುತ್ತಿರಲ್ಲಿಲ್ಲ.ಮತ್ತು ಕೆಲವರು ಕೂಡು ಕುಟುಂಬದಿಂದ ಹೊರಬಂದು ಇನ್ನೊಂದು ಕಡೆ ಒಕ್ಕಲುತನಕ್ಕೆ ಕೂತರೂ ಮೂಲ ಮನೆಯ ಎಲ್ಲಾ ಕಾರ್ಯಗಳಿಗೆ ಹೋಗಿ ಬರುತ್ತಿದ್ದರು.
ಕುಟುಂಬದ ದೈವಗಳು ಕೂಡ ಅಲ್ಲಿ ಒಂದೇ ರಕ್ತ ಹಂಚಿಕೊಂಡವರಿಗೆ ಯಾರು ಬಿಡಿಸಲಾಗದ ಗಟ್ಟಿಯಾದ ಕೊಂಡಿ ಅಗಿತ್ತು.
ಅಂತಹ ಮನೆಗಳಲ್ಲಿ ಅನುಕೂಲವಂತನ ಕುಟುಂಬದ ದೈವಗಳು,ಜಾಗದ ದೈವಗಳ ಧರ್ಮ ಚಾವಡಿಯ ಒಟ್ಟಿನಲ್ಲಿ ಇನ್ನೊಂದು ಮಂಚದಲ್ಲಿ ಇದ್ದರೆ,ಬಡವನ ಅಥವಾ ವಲಸೆ ಕುಟುಂಬಿಕನ ದೈವ ಮತ್ತು ಮುಡಿಪು ಬಿಳಳಿನ ಬುಟ್ಟಿಯಲ್ಲಿ( ತುಳುವಿನಲ್ಲಿ ಬೂರುದ ಬುಟ್ಟಿ) ಸೇರಿ ಮನೆಯ ಅಟ್ಟದಲ್ಲಿ ಜೋಪಾನವಾಗಿ ಇತ್ತು.ವರ್ಷಕ್ಕೊಂದು ಸಾರಿ ಕುಟುಂಬಿಕರನ್ನು ಕರೆದು, ಅದನ್ನು ಕೆಳಗೆ ತೆಗೆದು ಚೆನ್ನಾಗಿ ತೊಳೆದು ಪರ್ವ ತಂಬಿಲ ಅಗೆಲು ಬಡಿಸಲಾಗುತ್ತಿತ್ತು.ಅದರ ಜೊತೆಗೆ ನಮ್ಮೊಂದಿಗೆ ಇದ್ದು ಅನಂತರದ ಪರಲೋಕ ಗೈದವರಿಗೂ ಅ ದಿನ ಸಮ್ಮನ ಅಗೆಲು ಬಡಿಸುವ ಕ್ರಮವೂ ಇತ್ತು.ಅ ದಿನ ಕುಟುಂಬದ ದೈವ ಮನೆಯ ಕುಟುಂಬದ ಕೆಲ ಸದಸ್ಯನಿಗೆ ಬರುವುದು,ಕುಟುಂಬದಲ್ಲಿರುವ ಲೋಪ ದೋಷ ಹೇಳುವುದು,ಕೆಲ ಹೆಂಗಸರಿಗೆ ಹೆಣ್ಣು ದೈವ ಮತ್ತು ಹಿರಿಯರು ಬರುವುದು ಕುಟುಂಬವನ್ನು ಚೆನ್ನಾಗಿ ನಡೆಸುಕೊಂಡು ಹೋಗುವಂತೆ ಬುದ್ದಿಮಾತು ಹೇಳಿ ಅಸರು,ಬೊಂಡ ಕುಡಿದು‌ ಹೋಗುವುದು ಮಾಮೂಲಿ ಅಗಿತ್ತು.ಒಂದೊಂದು ಮನೆಯಲ್ಲಿ ಐದಾರು ಜನಕ್ಕೆ ದೈವ ಬಂದು ಹೋಗುವುದು ಮಾಮೂಲಿಯೂ ಅಗಿತ್ತು ಅ ಕಾಲದಲ್ಲಿ. ಇದೊಂದು ರೀತಿ‌ ಕುಟುಂಬ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಕೊಂಡಿತ್ತು, ನಂಬಿಕೆಯನ್ನು ಕೂಡ ಉಳಿಸಿಕೊಂಡು ಬಂದಿತ್ತು ಅನ್ನೊದು ಮಾತ್ರ ಸುಳ್ಳಲ್ಲ.

ಕುಟುಂಬಕ್ಕೊಂದು ಅಲಡೆ ಯಾಕೆ ಬೇಕು?
ತುಳುನಾಡಿನಲ್ಲಿ ಸಿರಿ ಸೂಕೆಬಾಧೆ ಇಲ್ಲದ ಕುಟುಂಬಗಳು ಇರಲು ಸಾಧ್ಯವಿಲ್ಲ. ಅದ್ದರಿಂದ
ಪ್ರತಿಯೊಂದು ಕುಟುಂಬದ ಮನೆಗೆ ಆಲಡೆ ಎಂಬುದು ಮುಖ್ಯವಾಗಿರುತ್ತದೆ.ಎಲ್ಲಾ ಕುಟುಂಬಗಳಿಗೆ ಒಂದೇ ಆಲಡೆ ಅಗಿರುವುದಿಲ್ಲ.ಬೇರೆ ಬೇರೆ ಅಲಡೆಗಳು ಅಗಿರುತ್ತವೆ.ನಮ್ಮ ಹಿರಿಯರು ಯಾವ ದಿಕ್ಕಿನಿಂದ ವಲಸೆ ಬಂದಿದ್ದರೊ, ಅ ಕಡೆಗೆ ನಮ್ಮ ಆಲಡೆಗಳು ಇರುತ್ತವೆ ಅನ್ನೊದರಲ್ಲಿ ಸಂಶಯ ಇಲ್ಲ.ಯಾಕೆಂದರೆ ಮೂಡಾಣ ಭಾಗದ ಜನರಿಗೆ ಮೂಡಾಣದಲ್ಲಿಯೆ ಆಲಡೆಗಳಿವೆ.ಒಂದು ವೇಳೆ ಮೂಡಾಣದ ಒಬ್ಬಿಬ್ಬರು ಪಡುವಣ ದಿಕ್ಕಿನಲ್ಲಿರುವ ಯಾವುದಾದರೂ ಅಲಡೆಗೆ ಹೋಗುತ್ತಿದ್ದರೆ ಅವರ ಹಿರಿಯರು ಅ ಕಡೆಯಿಂದಲೇ  ಈ ಕಡೆ ಬಂದವರು ಅನ್ನೊದು ಸ್ಪಷ್ಟವಾಗುತ್ತದೆ‌.ಹಿರಿಯರು ಹೋಗುತ್ತಿದ್ದ  ಅಲಡೆಗಳನ್ನು ಬದಲಿಸಿ ಇನ್ನೊಂದು ಅಲಡೆಗೆ ಹೋಗುವಂತೆಯೂ ಇಲ್ಲ.
ಆಲಡೆಯಲ್ಲಿ ಈಗ ಈಶ್ವರ ದೇವರು ಲಿಂಗ ರೂಪದಲ್ಲಿ‌ ಇದ್ದರೆ,ಉರಿ ಬೆರ್ಮರು,ಜಯವುಳ್ಳ ಬೆರ್ಮರು ಈ ರೀತಿಯ ಹೆಸರಿನ ಬೆರ್ಮರು ಪ್ರಧಾನವಾಗಿ ಇರುತ್ತಾರೆ.ತುಳುನಾಡಿನ ಸತ್ಯನಾಪುರದ ಸಿರಿಗಳಿಗೆ,ಕುಮಾರನಿಗೆ ಅಲಡೆಯಲ್ಲಿ ಅರಾಧನೆ ಇದೆ.
ಜೊತೆಗೆ ಪರಿವಾರ ಶಕ್ತಿಗಳಾದ ನಾಗ, ಲೆಕ್ಕೆಸಿರಿ, ನಂದಿಗೊಣ,ಪಂಜುರ್ಲಿ,ಪಿಲ್ಚಂಡಿ ಇವುಗಳು ಇರುತ್ತವೆ.ಇವಕ್ಕೆಲ್ಲ ಒಟ್ಟಿಗೆ ಸೇರಿ ಪ್ರತಿ ಕುಟುಂಬದ ಮನೆಯಿಂದ ಬಲಿವಾಡು,ಪುಂಡಿಪನವು,ಹರಕೆ ಸೇವೆಯನ್ನು ಆಲಡೆಗೆ ಒಪ್ಪಿಸುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಬಲಿವಾಡು ಅಂದರೆ ಒಂದು ಸೇರು ಅಕ್ಕಿ,ಒಂದು ತೆಂಗಿನಕಾಯಿ,ಹುರುಳಿ,ಗರೀಕೆ,ಹಿಂಗಾರದ ಜೊತೆಗೆ ಮುಷ್ಟಿ ಹಣ ಸಂದಾಯ.
ಬಲಿವಾಡು ಹರಕೆ ಒಪ್ಪಿಸದಿದ್ದರೆ ಏನಾಗುತ್ತದೆ?
ಹರಕೆ ಒಪ್ಪಿಸದಿದ್ದರೆ ಕುಟುಂಬದ ಹೆಣ್ಣುಮಕ್ಕಳಿಗೆ ಸಿರಿಗಳು ಸೂಕೆ ಭಾದಗದಲ್ಲಿ ಕಾಣುತ್ತಾರೆ. ಈ ಸೂಕೆ ಅನ್ನೊದು ತುಲುನಾಡಿನ ಸಿರಿಗಳು ಜೊಗಕ್ಕೆ ಬರುವುದು.ಏಳ್ವರು ಸಿರಿಗಳಲ್ಲಿ ಒಂದು ಸಿರಿ ಬಂದು ಹೆಣ್ಣುಮಗಳನ್ನು ಪೀಡಿಸುತ್ತಿರುವುದು.ಇದರ ಲಕ್ಷಣಗಳು ಹೇಗೆ ಎಂದರೆ ಯಾರಲ್ಲೂ ಮಾತಾನಾಡದೇ ಮೌನಕ್ಕೆ ಶರಣಗುವುದು,ಯಾರೊಂದಿಗೂ ಬೆರೆಯದೇ ಇರುವುದು,ಗಂಡನ ಸಣ್ಣ ಮಾತಿಗೂ ಬಾಯಿಗೆ ಬಾಯಿ ಮಾತನಾಡುವುದು,ತಗಾದೆ ತೆಗೆಯುವುದು,
ಯಾವುದಾದರೂ ಕುಟುಂಬದ ಕಾರ್ಯಕ್ರಮದಲ್ಲಿ ದರ್ಶನ ಬರುವುದು ಈ ರೀತಿ.
ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ ಅಂದ್ರೆ ಸ್ಯೊ...! ಎಂದೂ ಮತ್ತು ನಾರಾಯಣ ದೇವರ ಹೆಸರನ್ನು ಹೇಳಿ ದರ್ಶನ ಬಂದರೆ ಇದು ಸಿರಿಸೂಕೆ ಎಂದು ದೃಡವಾಗುತ್ತದೆ.ಇಂತಹ ಹೆಣ್ಮಕ್ಳ ಮೇಲೆ ಸೂಕೆ ಬಾಧಗಗಳನ್ನು ಮೊದಲೆಲ್ಲ ಮನೆಗೆ ಕುಮಾರನನ್ನು ತರಿಸಿಕೊಂಡು ಸಂದಿ ಹೇಳಿಸಿ ನಂತರ ಅದಕ್ಕಾಗುವ ಪರಿಹಾರ ಮಾಡಿಸಿ ಸರಿಪಡಿಸಿ ನಂತರ ಮತ್ತೆ ಶರೀರದ ಮೇಲೆ ಬಾರದ ಹಾಗೆ ಆಲಡೆಗೆ ವರ್ಷಕ್ಕೊಮ್ಮೆ ಹೋಗಿ ಹರಕೆ ಒಪ್ಪಿಸಿ,ಅಲ್ಲಿಯ ಮಣ್ಣು ಪ್ರಸಾದ ಹಾಕಲು ಹೇಳುತ್ತಿದ್ದರು.ಹಾಗೆ ಮಾಡಿದ್ರೆ ಸೂಕೆಬಾಧೆ ಬರುವುದಿಲ್ಲ.ಮತ್ತೊಂದು ವಿಚಾರ ಅಂದ್ರೆ ಕುಟುಂಬದ ಎಲ್ಲಾರಿಗೂ ಸೂಕೆ ಬಾಧೆ ಬರುವುದಿಲ್ಲ,ಒಂದು ಕುಟುಂಬದಲ್ಲಿ ಏಳೆಂಟು ಕವಳುಗಳು ಇದ್ದರೆ ಅದರಲ್ಲಿ ಐದು ಕವಳಿನಲ್ಲಿ ಕುಟುಂಬಿಕರಿಗೆ ಈ ಬಾಧೆ ಇರುತ್ತದೆ.ಆದರೆ 
ಈಗ ಕಾಲ ಬದಲಾಗಿದೆ,ಮೊದಲು ಸೂಕ ಬಾದಗ ಇದ್ದ ಹಿರಿಯರ ಮನೆಯವರು ಮಾತ್ರ ಆಲಡೆಗೆ  ಹೋಗುವುದು ಈಗ ಕಾಣಬಹುದು.ಉಳಿದ ಹೆಚ್ಚಿನ ಕುಟುಂಬಗಳಿಗೆ ಅಲಡೆ ವಿಚಾರ ತಿಳಿದಿರುವುದಿಲ್ಲ.ಕಾರಣ ಈಗಿನ‌ ಕುಟುಂಬದ ಮನೆಗಳು ಟ್ರಸ್ಟ್, ಸಮಿತಿಗಳಾಗಿ ಹೋಗಿವೆ. ಇವರುಗಳು ಇದರ ಬಗ್ಗೆ ಅಷ್ಟೊಂದು ಗೋಜಿಗೆ ಹೋಗುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಹೆಣ್ಮಕ್ಳಿಗೆ ಮೈಮೇಲೆ ಸೂಕೆಬಾಧೆ ದರ್ಶನ ಬಾರದಿದ್ದರೂ, ಬೇರೆ ಬೇರೆ ರೂಪದಲ್ಲಿ ಇದರ ಭಾದಗಗಳು ತೋರುತ್ತವೆ.ಮದುವೆಯಾದ ಮೇಲೆ ಗಂಡು ಹೆಣ್ಣಿಗೆ ಸರಿಯಾಗಿ ಕೂಡಿ ಬಾಳದೇ ಇರುವುದು.ಮಾನಸಿಕ ಖಿನ್ನತೆಗೆ ಒಳಗಾಗುವುದು.ಹಠಮಾರಿ,ವಿಚಿತ್ರವಾಗಿ ವರ್ತಿಸುವುದು,ಮೌನವಾಗಿ ಇರುವುದು,ಮದುವೆ ತಪ್ಪುವುದು ಇವೆಲ್ಲವೂ.
ಒಟ್ಟಿನಲ್ಲಿ ಹೇಳುವುದಾದರೆ ಅ ಕಾಲದಲ್ಲಿ ಮಾನಸಿಕವಾಗಿ ನೊಂದು ಬೆಂದ ಜೀವಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿ ಸಂತೈಸಿದ ಕೇಂದ್ರಗಳು ಇದ್ರೆ ಅದು ತುಳುನಾಡಿನ ಆದಿಆಲಡೆಗಳು. ಕುಟುಂಬದಲ್ಲಿ ಸಿರಿಸೂಕೆ ಹಿಡಿದ ಮಹಿಳೆಯರ(ದಲ್ಯಕ್ಕೆ ನಿಲ್ಲುತ್ತಿದ್ದವರ) ಪ್ರೆತಕ್ಕೆ ಆಲಡೆಗೆ ಹೋಗಿ ಮುಕ್ತಿ ಕೊಡಿಸುವ ಕ್ರಮ ಈಗಲೂ ಕೆಲವು ಕಡೆ ಇದೆ.
ಅದ್ದರಿಂದ ನಿಮ್ಮ ನಿಮ್ಮ ಆಲಡೆಗಳನ್ನು ಯಾವತ್ತಿಗೂ ಕಡೆಗಣಿಸಬೇಡಿ.ಕಾಲಕಾಲಕ್ಕೆ ಹರಕೆ ಒಪ್ಪಿಸುವ ಹಿರಿಯರ ಕ್ರಮ ನಿಮ್ಮ ಕುಟುಂಬದಲ್ಲಿ ಇದ್ದರೆ ಅದನ್ನು ಮುಂದುವರೆಸಿ.ವಿಜ್ಞಾನಯುಗ ಎಷ್ಟೇ ಮುಂದುವರೆದರೂ ಅದರಲ್ಲಿ ಸರಿಪಡಿಸಲಾಗ ಮಾನಸಿಕ ಸಮಸ್ಯೆಗಳನ್ನು, ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪರಿಹರಿಸಿದ ಉದಾಹರಣೆ ಎಷ್ಟೋ ಇದೆ.

ನಾವುಗಳು ಕುಟುಂಬದ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು.
ನಮ್ಮ ಹಿರಿಯರು ಎಲ್ಲಾದಕ್ಕೂ ಕ್ರಮ ಕಟ್ಟಲೆ,ಕಟ್ಟು ಪಾಡು ಎಂಬ ನಿಯಮಗಳನ್ನು ಮುಂದಿಟ್ಟು ದೈವಗಳ‌ ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ.ಸಿಕ್ಕ ಸಿಕ್ಕಲ್ಲಿ ಎಲ್ಲಾ ಕಡೆ ಕುಟುಂಬದ ದೈವಗಳನ್ನು ನಂಬುವ ಅಗಿಲ್ಲ.ಮುಡಿಪು ಕಟ್ಟುವ ಅಗಿಲ್ಲ.
ಒಂದೇ ಕಡೆ ನೆಲೆನಿಂತು ಕುಟುಂಬದ ದೈವಗಳನ್ನು,ಗತಿಸಿ ಹೋದ ನಮ್ಮ ಹಿರಿಯರನ್ನು ಸ್ಮರಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ.
ಕುಟುಂಬದಲ್ಲಿ ಅಜ್ಜ ಇದ್ದರೆ ಅಜ್ಜ,ಅಜ್ಜನ ಅನಂತರ ಮಾವ ಇದ್ದರೆ ಮಾಮ,ಅನಂತರ ಹಿರಿಯ ಅಕ್ಕನ ಹಿರಿಯ ಮಗ ದೈವಗಳ ಕಾರ್ಯಗಳನ್ನು ನಡೆಸುವ ಹಕ್ಕು ಹೊಂದಿರುವವ.ಅದಕ್ಕೆ ಹಿಂದಿನ ಕಾಲದ ಜನರು ಒಂದು ಗಾದೆಯನ್ನು ಹೇಳುತ್ತಾರೆ "ಮುಂಡಾಸುನು ತರೆಕ್ಕ್ ಕಟ್ಟೊಡು,ಕಾರುಗು ಕಟ್ಟುನ ಅತ್ತ್" ಅಂತ.ಅಂದ್ರೆ ಈ ಕಾರ್ಯಗಳನ್ನು ಎಲ್ಲಾ ಪ್ರಾಯದಲ್ಲಿ ಸಣ್ಣವರು ಮಾಡುವುದಲ್ಲ.ಹಿರಿಯರು ಮಾಡಬೇಕು.
ಕಿರಿಯರು ಅದಕ್ಕೆ ಸಂಪೂರ್ಣವಾಗಿ ಪ್ರೊತ್ಸಾಹ ಕೊಡುತ್ತ,ಮಾಡುವ ವಿಧಾನವನ್ನು ಕಳಿತು ಕೊಳ್ಳಬೇಕು.ಯಾಕೆಂದರೆ ಈ ಭೂಮಿಯಲ್ಲಿ ಯಾರು ಕೂಡ ದೀರ್ಘಾಯುಷ್ಯದ ಜನರಿಲ್ಲ,ಅಲ್ಪಾಯುಷ್ಯದ ಜನರು ಇರುವ ಇಲ್ಲಿ ಯಾರ ಜೀವನ ಎಷ್ಟು ದಿನ ಎಂದು ಹೇಳಲಾಗುವುದಿಲ್ಲ.ಯಾಜಮಾನ ಕಳೆದು ಹೋದರೆ ಅವನ ನಂತರದವ ಈ ಕಾರ್ಯಗಳನ್ನು ಮಾಡಲು ಸದೃಡನಿರಬೇಕು.ಎಲ್ಲಾ ವಿಚಾರಗಳು ಅವನಿಗೆ ತಿಳಿದಿರಬೇಕು. ಅದಕ್ಕಾಗಿ ಮುಂಚಿತವಾಗಿ ಬಂದು ನಿಂತು ಈ ಎಲ್ಲಾ ವಿಚಾರಗಳನ್ನು ಸಣ್ಣ ಪ್ರಾಯದ ಎಲ್ಲಾ ಕುಟುಂಬದ ಸದಸ್ಯರು ತಿಳಿದು ಕೊಳ್ಳಬೇಕು. ಮತ್ತೊಂದು ವಿಚಾರ ಅಂದರೆ ಊರಿಗೊಂದು ಕಟ್ಟು ಇರುವ ಈ ತುಲುನಾಡಿನಲ್ಲಿ ನಮ್ಮ ಕುಟುಂಬದ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ಮತ್ತು ನಮ್ಮ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ತುಂಬಾ ವ್ಯತ್ಯಾಸ ಇರಬಹುದು.ಅದಕ್ಕಾಗಿ ಅದನ್ನು ಚೆನ್ನಾಗಿ ತಿಳಿಯಲು ಕುಟುಂಬದ ಮನೆಗೆ ಮುಂಚಿತವಾಗಿ ಹೋಗಬೇಕು.ಅಲ್ಲಿನ ರೀತಿ ರೀವಾಜು ತಿಳಿದುಕೊಳ್ಳಬೇಕು.
ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನಾವು‌ ಪಾಲಿಸಿಕೊಂಡು ಬರಬೇಕು.
ಎಷ್ಟೋ ಸದಸ್ಯರು ತಮ್ಮ ಮೂಲ ಕುಟುಂಬದ ಮನೆ ಸಿಗದೇ ಹುಡುಕಾಟದಲ್ಲಿ ಕಂಗಾಲಾಗಿ ಹೋಗಿದ್ದಾರೆ.ಒಂದು ತಲೆಮಾರಲ್ಲಿ ಕುಟುಂಬದ ಕೊಂಡಿ ತಪ್ಪಿ ಹೋಗಿ, ಅದು ಮೂರು ತಲೆಮಾರು ದಾಟಿದ್ರೆ ಮತ್ತೆ ಹುಡುಕುವುದು ಕಷ್ಟ ಸಾದ್ಯ.ಅದಕ್ಕಾಗಿ ಕುಟುಂಬದ ಕೊಂಡಿಯನ್ನು ಯಾವತ್ತಿಗೂ ಮುರಿದು ಕೊಳ್ಳಬಾರದು.
ತುಳುನಾಡಿನಲ್ಲಿ ಸ್ವರ್ಗ ನರಕದ ಕಲ್ಪನೆ ಇಲ್ಲ(ಇತ್ತಿಚೆಗೆ ಬಂದಿದೆ) ಇಲ್ಲಿ ಆಳಿಯ ಕಟ್ಟಿನಲ್ಲಿ ಸತ್ತ ವ್ಯಕ್ತಿಯ ಉತ್ತರಕ್ರೀಯದಿಯನ್ನು ಮುಂಚೆ ನೀರನೆರಳು ಕಟ್ಟಿ "ಮುರಿಯೊ" ಎಂದು ಕೂಗಿ ಇನ್ನಿತ್ತರ ಕಾರ್ಯಗಳಲ್ಲಿ ಮುಗಿಸುವ ಕ್ರಮ.ಆನಂತರ ಕುಟುಂಬದ ಮನೆಯಲ್ಲಿ ಮಡಪಜೆ ಮತ್ತು ಹದಿನಾರು ಕೂಡಿಸುವ ಕ್ರಮ.ದೀಪಾವಳಿಯಂದು ಅ ಸತ್ತ ವ್ಯಕ್ತಿಗೆ ಕುಟುಂಬದ ಮನೆಯಲ್ಲಿ ಅವಲಕ್ಕಿ ಮತ್ತು ಅಗೆಲು ಹಾಕುವ ಕ್ರಮ.ಅದ್ದರಿಂದ ಅತ ಎಷ್ಟೇ ದೊಡ್ಡ ಬಂಗಲೆಯಲ್ಲಿ ಕುಳಿತ ಶ್ರೀಮಂತನಾದರೂ ಆತ ಸತ್ತಗ ಅತನ ಪ್ರೆತವನ್ನು ಹಂಚಿನ ಇಲ್ಲವೇ ಮನೆಯ ಮುಳಿಹುಲ್ಲಿನ ಹಳೆಯ ಕುಟುಂಬದ ಮನೆಗೆ ತಂದು ಕುಟುಂಬದ ಹಿರಿಯರ ಜತೆ ಸೇರಿಸುವ ಕ್ರಮ ನಮ್ಮದು.
ಇನ್ನು ಮುಡಿಪು ಇದು ಒಂದು ಕುಟುಂಬದಲ್ಲಿ ಒಂದೇ ಮುಡಿಪು ಎನ್ನುವ ಕ್ರಮ ಇದೆ.
ಒಂದು ವೇಳೆ ಕುಟುಂಬದ ಒಬ್ಬ ವ್ಯಕ್ತಿ ಮುಡಿಪಿಗೆ ಹಣ ಹಾಕದೇ ಇದ್ದರೆ ಅತ ಕುಟುಂಬದ ಸದಸ್ಯನಾಗಲು ಅನರ್ಹ.ಮತ್ತು ಆತ ಕುಟುಂಬದ ಪಾಲಿಗೆ ಸತ್ತ ವ್ಯಕ್ತಿ ಇದ್ದಂತೆ.ಅದ್ದರಿಂದ ಹಿರಿಯರು ತುಲುವರಿಗೆ ಕುಲ ದೇವರು ಯಾರು ಅಂದರೆ ತಿರುಪತಿ ತಿಮ್ಮಪ್ಪ ದೇವರು ಎನ್ನುತ್ತಿದ್ದರು.ಈ ದೇವರಿಗೆ ನಮ್ಮ ಕಡೆಯಿಂದ ಮುಡಿಪು ಹಣ ಎಂದು ಮೀಸಲು ಹಣವನ್ನು ಡಬ್ಬಿಯಲ್ಲೊ,ಬಿದಿರಿನ ವೊಂಟೆಯಲ್ಲೊ ಇರಿಸುತ್ತಿದ್ದಾರು.ಅದನ್ನು ಅಟ್ಟದಲ್ಲಿ ಜೋಪಾನವಾಗಿ ಇರಿಸುತ್ತಿದ್ದರು.
ಈ ಮುಡಿಪನ್ನು ದಾಸಯ್ಯರು ಬಿಟ್ರೆ ಯಾವೊಬ್ಬ ವ್ಯಕ್ತಿಗೂ,ಎಷ್ಟೇ ದೊಡ್ಡ ಬ್ರಾಹ್ಮಣ ಅರ್ಚಕನಿಗೂ ಮುಟ್ಟುವ ಮತ್ತು ಬಿಚ್ಚುವ ಅಧಿಕಾರ ಇಲ್ಲ.ವರ್ಷಕ್ಕೊಮ್ಮೆ ಕಾಲಾವಧಿ ಸಮಯದಲ್ಲಿ ದಾಸಯ್ಯರು ಬಂದು ಮುಡಿಪು ಬಿಚ್ಚಿ ತುಳಸಿ ಕಟ್ಟೆಯ ಎದುರಿಗೆ ಹರಿ ಸೇವೆ,ಮಣೆಪೂಜೆ ಕಾರ್ಯಕ್ರಮ ಮಾಡುವ ರೂಡಿ.ಇನ್ನೂ ಕೆಲವೊಂದು ಕಡೆ ಸೋಣ ಶನಿವಾರದಂದು ಮುಡಿಪಿಗೆ ಹಣ ತೆಗೆದು‌ ಇರಿಸುತ್ತಾರೆ.ಅದನ್ನು ಕಾಲಾವಧಿ ದಿನ ಕುಟುಂಬದ ಮನೆಗೆ ಕೊಂಡೊಗಿ ಮುಡಿಪಿಗೆ ಹಾಕುತ್ತಾರೆ. ಉಡುಪಿ ಭಾಗದಲ್ಲಿ ದೀಪಾವಳಿ ಸಮಯದಲ್ಲಿ‌ ಮುಡಿಪು ಬಿಚ್ಚುತ್ತಾರೆ.ಎಲ್ಲಾ ಕಡೆಯಲ್ಲಿ ಒಂದೇ ರೀತಿಯ ಕಟ್ ಕಟ್ಲೆ ಇರುವುದಿಲ್ಲ.
ಅದ್ದರಿಂದ ಹಿರಿಯರು ಯಾವ ರೀತಿ ಮಾಡಿಸಿಕೊಂಡು ಬಂದಿದ್ದಾರೊ ಅದೇ ರೀತಿಯಲ್ಲಿ ಮುಂದುವರೆಸಿ.
ಕುಟುಂಬದ ದೈವಗಳಿಗೆ ಬ್ರಹ್ಮಕಲಸ ಬೇಕೆ ಬೇಡವೇ ಎನ್ನುವುದು ಈಗ ಸಾಮಾನ್ಯವಾಗಿದೆ.
ಪ್ರಸ್ತುತ ಕಾಲದಲ್ಲಿ ಕುಟುಂಬದ ಮನೆಗಳು,ಕುಟುಂಬದ ಮನೆಗಳಾಗಿ ಇರದೇ ಚಾವಡಿ, ತರವಾಡು,ಟ್ರಸ್ಟ್, ಸಮಿತಿಗಳು ಎಂದು ನಾಮಾಂಕಿತ ಅಗಿವೆ.ಅಲ್ಲಿ ಯಾರು ವರ್ಷವೀಡಿ ಉಳಿದುಕೊಳ್ಳುವ ನಿಯಮ ಇಲ್ಲ.
ಕೂಡುಕುಟುಂಬದ ಯಾಜಮಾನ ಅಲ್ಲಿಲ್ಲ‌.ಅ ಸ್ಥಾನವನ್ನು ಗೌರವಾಧ್ಯಕ್ಷ ಎಂಬ ಸ್ಥಾನದಲ್ಲಿ ತುಂಬಿದ್ದಾರೆ.
ಮತ್ತು ಈಗೀಗ ಕುಟುಂಬದ ಮನೆಗಳಲ್ಲಿ ಗಡಿ ಅದ ವ್ಯಕ್ತಿಗಳು ಭಾರಿ ಅಪರೂಪ.ಹಾಗೂ ವರ್ಷದಲ್ಲಿ ಸಂಕ್ರಾಂತಿ ಮತ್ತು ಇನ್ನಿತರ ಕಾರ್ಯಕ್ರಮದಂದು‌ ಮಾತ್ರ ಚಾವಡಿ ಬಾಗಿಲು ತೆರೆಯುತ್ತಾರೆ.ಮತ್ತೆ ಇಡೀ ವರ್ಷ ಚಾವಡಿಗೆ ಬಾಗಿಲು ಬೀಗ.ಇಂತಹ ಪರಿಸ್ಥಿತಿಯಲ್ಲಿ ನಾವು ಇರುವಾಗ ಒಂದು ಕಡೆ ದೈವಗಳ ಚಾಕ್ರಿ ಮಾಡಲು ಹಿಂದೇಟು ಹಾಕುವ ಯುವಜನತೆ.ಕುಟುಂಬದ ಮನೆ ಎಂದರೆ ನಿರ್ಲಕ್ಷ್ಯ ಭಾವನೆ,
ಸಮಯದ ಕೊರತೆ ಎಂಬುದು ಈಗ ಎಲ್ಲಾರನ್ನು ಕಾಡುವ ವ್ಯಾಧಿ.ಇನ್ನು ನಮ್ಮ ಕೆಲವರಲ್ಲಿ
ದೈವಗಳ ಸರಿಯಾದ ಮಾಹಿತಿಯೆ ಇಲ್ಲ.
ಹಿಂದೆ ಹೆಚ್ಚಿನ ಕುಟುಂಬದ ಮನೆಯಲ್ಲಿ ಗಡಿ ಪಟ್ಟಿ ಅದವರು ಅರಸು ದೈವಗಳಿಗೆ ಪೂಪೂಜನೆ ಮಾಡುತ್ತಿದ್ದರು,ಕಲಸ ಕಟ್ಟುತ್ತಿದ್ದರು,ಶುದ್ದ ಹೋಮ ಇಡುತ್ತಿದ್ದರು. ಅದು ಅ ಕಾಲದಲ್ಲಿ ಒಂದು ರೀತಿಯ ಕ್ರಮ ಕಟ್ಟಲೆ ಕೂಡ ಅಗಿತ್ತು.ಆದರೆ ಈಗ ಒಂದೆರಡು ಜಾಗದಲ್ಲಿ‌ ಮಾತ್ರ ಅದು ಉಳಿದಿದೆ.
ಈಗೀಗ ಅರ್ಚಕರಿಂದ ಮಾಡಿಸಿದ್ರೆ ಎಲ್ಲಾವೂ ಸರಿ ಅಗುತ್ತೆ ಅನ್ನುವ ಅಭಿಪ್ರಾಯ ಎಲ್ಲಾ ಕುಟುಂಬಿಕರ ಒಕ್ಕೊರಲಿನ ಧ್ವನಿ. ಅದ್ದರಿಂದ
ಇಂದು ಅರ್ಚಕರು ಈ ಕೆಲಸ ಮಾಡುತ್ತಾರೆ.ನೆನಪಿರಲಿ ಯಾವುದೇ ಜಾತಿಯಲ್ಲಿರುವ್ಸ್ ಅರ್ಚಕನಾದರೂ ಅತ ಮಾಡುವುದು ದೇವತಾ ಕ್ರೀಯೆಯಲ್ಲಿ.ಅವನ ತಪ್ಪಿಲ್ಲ ಬಿಡಿ,ವೈಧಿಕ ಅರ್ಚನ ಪದ್ದತಿಯಲ್ಲಿ ಬ್ರಹ್ಮಕಲಸವು ಬರುತ್ತದೆ.ಹಾಗೆಯೇ ಕಲಸ ಕಟ್ಟುವ ಕ್ರಮ,ಹೋಮ ಇಡುವ ಕ್ರಮ ತುಲುವ ಪದ್ದತಿಯಲ್ಲೂ ಹಿಂದೆ ಇದ್ದದ್ದು ನಿಜ.ಆದರೆ 
ಜಿಜ್ಞಾಸೆ ಅಂದ್ರೆ ಅರಸು ದೈವಗಳಿಗೆ ಪೂಪೂಜಾನೆ ಮಾಡಲು ಅರ್ಚಕರಿಗೆ ಗಡಿಪಟ್ಟಿ ಅಗಿದೆಯೊ? ಅನ್ನೊದು.ಇಂತಹ ಯೋಚನೆಯನ್ನು ಒಮ್ಮೆ ಕೂಡ ನಾವು ಮಾಡಿಲ್ಲ.
ಇಂತಹ ತುಂಬಾ ಬದಲಾವಣೆಗಳು ಆಗಿರುವಾಗ,ಮತ್ತು ಇಂತಹ ಕಾರ್ಯಕ್ಕೆ ನಾವೇ ಅನುವು ಕೊಟ್ಟಿರುವಾಗ ಈ ಅವರು ಅವರ ವೈಧಿಕ ಕ್ರಮದಲ್ಲಿ ದೈವಗಳಿಗೆ ಬ್ರಹ್ಮಕಲಸ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ.ನಾವು ಬದಲಾದರೆ ಮಾತ್ರ ಅದನ್ನು ಬದಲು ಮಾಡಬಹುದು.
ಹಿಂದೆ ಕುಟುಂಬದ ಜಾಗ ಕುಟುಂಬದ ಯಜಮಾನನ ಅಧೀನದಲ್ಲಿ ಇತ್ತು.ಅದು ಪರಂಪರಗತವಾಗಿ ಕುಟುಂಬದ ಸದಸ್ಯನಿಗೆ ಸೇರುತ್ತಿತ್ತು.ದೈವಗಳಿಗೆ ತಕ್ಕಮಟ್ಟಿನಲ್ಲಿ ಸೇವೆ ಕೊಟ್ಟರೂ ಸಂತೃಪ್ತಿ ಅಗುತ್ತಿತ್ತು.ಯಾರು ಆಡಂಭರಕ್ಕೆ ಮಣೆ ಕೂಡ ಹಾಕಿದ್ದಿಲ್ಲ.ಹಾಕಲು ಅವರಲ್ಲಿ ಅಷ್ಟೊಂದು ಅನುಕೂಲವೂ ಇರಲಿಲ್ಲ.ಈಗ ಅನುಕೂಲ ಇದ್ದವರು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ.ಇಂದು ಕಾಲ ಬದಲಾಗಿ ಕುಟುಂಬದ ಜಾಗ ಎಲ್ಲಾರಿಗೂ ಹರಿದು ಹಂಚಿ ಹೋಗಿದೆ. 
ದೈವಕ್ಕೆ ಹತ್ತು ಸೆನ್ಸ್,ಇಪ್ಪತ್ತು ಸೆನ್ಸ್ ಜಾಗ ಉಳಿದಿರುತ್ತದೆ.ಕೆಲವು ಕಡೆ ಜಾಗ ಖರೀದಿಸಿ ಕುಟುಂಬದ ದೈವಗಳನ್ನು ನಂಬಿದವರೂ ಇದ್ದಾರೆ.
ಆದರೆ ಈಗಿನ ಕಾಲದ ಅಡಂಭರದ ಖರ್ಚುಗಳಲ್ಲಿ,ಕಲಸ ಉತ್ಸವದ ಕಾರ್ಯಕ್ರಮಗಳಿಂದ ಕುಟುಂಬದ ಮನೆಯಲ್ಲಿ(ಬಂದವರ ಮಕ್ಕಳಿರಲಿ,ಕುಟುಂಬದ ಮಕ್ಕಳಿರಲಿ) ಇದ್ದವನಿಗೆ ಯಾವುದೇ ಒಂದೆರಡು ದೈವಕ್ಕೆ ಸೇವೆ ಕೊಡುವುದು ಕೂಡ ಭಾರಿ ಕಷ್ಟ.ಯಾಕೆಂದರೆ ಮೂಲ ಪರಂಪರೆಯ ಪದ್ದತಿಯನ್ನು ಬಳಸಲು ಈಗಿನ ಕಾಲದಲ್ಲಿ ಯಾರಿಗೂ ಇಷ್ಟವಿಲ್ಲ.ಇಷ್ಟವಿದ್ದರೂ ಅ ಪದ್ದತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡವರೂ ಯಾರು ಇಲ್ಲ.
ಇಂತಹ ಪ್ರಕರಣದಿಂದಾಗಿ ಎಷ್ಟೋ ಕುಟುಂಬದ ಮನೆಗಳು ಈಗಲೂ ಅಜೀರ್ಣ ಅವಸ್ಥೆಯಲ್ಲಿ ಇದೆ.ಇನ್ನೂ ಕೆಲವು ಕಡೆ ಅರ್ಧಂಬರ್ಧವಾಗಿ ನಡೆಯುತ್ತವೆ.ಇನ್ನು ಕೆಲವು ಕುಟುಂಬದ ಮನೆಗಳಲ್ಲಿ ವ್ಯಾಜ್ಯಗಳು ನಡೆಯುತ್ತಲೇ ಇವೆ.
ಅದ್ದರಿಂದ ಕುಟುಂಬ ಸದಸ್ಯರು,ತಮ್ಮ ಕುಟುಂಬದ ಅಸ್ತಿ ಪಾಲಿನ ಮೇಲೆ ಕಣ್ಣಿಡದೇ ಎಲ್ಲಾ ಕುಟುಂಬಿಕರ ಶ್ರೇಯಸ್ಸಿಗಾಗಿ ವಂತಿಗೆ ಕೊಟ್ಟು ಸಹಕರಿಸುವುದು ಈಗಿನ ಕಾಲದಲ್ಲಿ ಅತೀ ಅವಶ್ಯಕ.ಯಾಕೆಂದರೆ ನಾವು ನಮ್ಮ ದೈವ ದೇವರಿಗೆ ಕಿಂಚಿತ್ತು ಮಟ್ಟದಲ್ಲಿಯಾದರೂ ಸೇವೆ ಕೊಟ್ಟರೆ ನಮಗೆ ಮತ್ತೊಂದು ಕಡೆ ಅದರ ಅನುಗ್ರಹವನ್ನು ದೈವ ದೇವರು ಪಾಲಿಸುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಕುಟುಂಬದವರಿಗೆ ಮತ್ತು ಕುಟುಂಬದ ದೈವಗಳಿಗೆ ಮೋಸ ಮಾಡಿ ಅದು ಕುಟುಂಬದ ವ್ಯಕ್ತಿ ಅಗಿರಲೀ ಇಲ್ಲವೇ ಹೊರಗಿನ ವ್ಯಕ್ತಿ ಅಗಿರಲಿ ದೈವ ದೇವರ ಆಸ್ತಿ ಅನುಭವಿಸಿದವರು ಯಾರು ಎಲ್ಲೂ ಉದ್ದಾರ ಆಗಿದ್ದೂ ಕಾಣುತ್ತಿಲ್ಲ.

ಕುಟುಂಬದ ಮನೆಯಲ್ಲಿ ನಿಮ್ಮ ಯಾವ ಸೇವೆ?
ಯಾರೊ ಜ್ಯೊತೀಷ್ಯ,ಮಂತವಾದಿ ನಿಮ್ಮ ಸಮಸ್ಯೆಗೆ ಪರಿಹಾರ ಹೇಳುತ್ತಾರೆ ನಿಮ್ಮ ಕುಟುಂಬದ ಮನೆಗೆ ಘಂಟೆ ಕೊಡಿ,ಮಣಿ ಕೊಡಿ,ಆರತಿ ತಟ್ಟೆ ಕೊಡಿ,ಅದು ಕೊಡಿ,ಇದು ಕೊಡಿ ಎಂದು, 
ಆದರೆ ಯಾವು ಯಾವುದೋ ಉಪಯೋಗ ಅಗದೇ ಇರುವ ವಸ್ತುಗಳನ್ನು ಹರಕೆಯ ಸೇವಾ ರೂಪದಲ್ಲಿ ನಿಮ್ಮ ಕುಟುಂಬದ ಮನೆಗೆ ಕೊಡಬೇಡಿ. ಯಾಕೆಂದರೆ ನಮ್ಮ ದೈವಗಳು‌ ಘಂಟೆ,ಶಂಖನಾದಕ್ಕೆ,ತಟ್ಟೆ ಅರತಿಗೆ ತಲೆತೂಗುವ ಶಕ್ತಿಗಳು ಅಲ್ಲ.ಅವುಗಳು ನಮ್ಮ ನಿರ್ಮಲಾ ಭಕ್ತಿಗೆ ಮತ್ತು ಯಜಮಾನನ ಮದಿಪಿಗೆ,ನಾವು ಅಲ್ಲಿ ಮಾಡುವ ಕೆಲಸ ಕಾರ್ಯದ ಸೇವೆಗೆ ತಲೆತೂಗುವ ದೈವಗಳು.
ಹಾಗೆ ನಿಮಗೆ ಕೊಡಲು ಮನಸ್ಸಿದ್ದರೆ ಕುಟುಂಬದ ಮನೆಯಲ್ಲಿ ಕುಟುಂಬದ ಕಾರ್ಯಕ್ರಮದಲ್ಲಿ  ಉಪಯೋಗ ಮತ್ತು ಉಪಕಾರ ಆಗುವಂತಹ ವಸ್ತುಗಳನ್ನು(ಪಾತ್ರೆಗಳು,ಅಡುಗೆ ಸಾಮಾಗ್ರಿಗಳು, ಮುಂತಾದ) ನೀಡಿರಿ.
ಹಾಗೆಯೇ ವರ್ಷದ ಒಂದು ಭಾರಿ ನಮ್ಮ ಹೆಸರಲ್ಲಿ ಕುಟುಂಬದ ನಾಗ ಬೆರ್ಮರಿಗೆ ತನು ಎರೆಯುವುದು,ತಂಬಿಲ ಕಟ್ಟುವುದು.
ಕುಟುಂಬದ ವೆಂಕಟರಾಮನ ದೇವರ ಮುಡಿಪುವಿಗೆ ಹುಂಡಿ ಹಣ ಹಾಕುವುದು.
ಕುಟುಂಬದ ಹೆಚ್ಚಿನ ಮನೆಯಲ್ಲಿ ಕಲ್ಲುರ್ಟಿ ಪಂಜುರ್ಲಿ ಮತ್ತು ರಾವುಕುಲೆ ದೈವ ಕುಟುಂಬದ ದೈವಗಳಾಗಿ ನಮಗೆ ಕಾಣ ಸಿಗುತ್ತವೆ. ಹಾಗಿದ್ದರೆ ಕಲ್ಲುರ್ಟಿಗೆ ಹೆಣ್ಣು ಹೆಂಟೆ ಕೋಳಿ (ಲಾಕಿ ಪೆರಡೆ)
ಕುಟುಂಬದ ಪಂಜುರ್ಲಿಗೆ ಹುಂಜ ಕೋಳಿ.
ರಾವು ಕುಲೆಗೆ(ಈಗ ರಾವುಗುಳಿಗ ಸಂಭೊದಿಸುತ್ತಾರೆ) ಒಂದು ಹುಂಜ ಕೋಳಿ. ಹಿರಿಯರಿಗೆ ಅಗೆಲು ಸಮ್ಮನಕ್ಕೆ ಒಂದು ಕೋಳಿ.
ಉಳಿದಂತೆ ಇತರ ದೈವಗಳಿಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ಪದ್ದತಿಯಂತೆ ನಡೆದು ಬಂದ ರೀತಿಯಲ್ಲಿ  ಕೋಳಿ ಅಕ್ಕಿ ತೆಂಗಿನಕಾಯಿ ಕೊಡುವ ಸೇವೆ ನೀಡುವುದು.
ಉಳಿದಂತೆ ಜಾಗದ ಧರ್ಮಚಾವಡಿಯಲ್ಲಿರುವ ದೈವಗಳಿಗೆ ಇಷ್ಟನು ಭಕ್ತಿಯ ಸೇವೆ ಕಡ್ಡಾಯವಾಗಿ ಕೊಡಬೇಕು.
ವರ್ಷದಲ್ಲಿ ಒಂದು ಸಾರಿ ಚೌತಿ ಹಬ್ಬ,ದೀಪಾವಳಿಗೆ ಬಳೆಕ್ಕಿ ಮರ ಹಾಕುವ ಹಬ್ಬ ಇದ್ದರೆ ಇವಕ್ಕೆ ನಿಮ್ಮಿಂದ ಆಗುವ ಸೇವೆ ನೀಡಿರಿ‌.
ಕುಟುಂಬದ ಕಿರಿಯರು,ಎಲ್ಲಾ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು ಮತ್ತು ಬಡ ಜೀವಗಳಿಗೆ ನಮ್ಮ ಕೈಯಲ್ಲಿ ಆಗುವಷ್ಟು ಸಣ್ಣ ಮಟ್ಟಿನ ಧನಸಹಾಯ ನೀಡುವುದು,ಅವರ ಆಶೀರ್ವಾದ ಪಡೆಯುವುದು ಒಳ್ಳೆಯದು.
ಇದೊಂದು ಕುಟುಂಬದ ಮನೆಯಲ್ಲಿ ನಡೆದುಕೊಂಡು ಬಂದ ಹಳೆಯ ಸಂಪ್ರದಾಯ.
ಕುಟುಂಬದ ಮನೆ ಹೇಗಿರಬೇಕು ಎಂದರೆ
ಕುಟುಂಬದ ಮನೆ ಎಂಬುವುದು  ನಮಗೆ ಸಂಸ್ಕಾರ, ಸಂಸ್ಕೃತಿ,ಶಿಸ್ತು, ಸಂಪ್ರದಾಯ ಕಳಿಸುವ ಕೇಂದ್ರವಾಗಬೇಕು.ಆಳಿದು ಹೋದ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಅಚಾರ ವಿಚಾರವನ್ನು ಮತ್ತೆ ನೆನಪಿಸುವ ತಾಣವಾಗಬೇಕು.
ಹಿಂದಿನ ಯಜಮಾನ ಪದ್ದತಿ ಈಗ ಇಲ್ಲದೇ ಇರುವುದರಿಂದ ಕುಟುಂಬದ ಮನೆಯ ನಾಯಕತ್ವ ವಹಿಸಿಕೊಂಡ ಹಿರಿಯ ವ್ಯಕ್ತಿ  ಸಹಿಷ್ಣು ಆಗಿರುಬೇಕು. ಎಲ್ಲಾರನ್ನು ಜತೆಯಾಗಿ ಒಗ್ಗೂಡಿಸಿಕೊಂಡು ಹೋಗುವ ಮನೊಧರ್ಮ ಇರಬೇಕು.ಎಲ್ಲಾರೊಂದಿಗೆ ಪ್ರೀತಿ ಪಾತ್ರದಿಂದ ಇದ್ದರೆ ತುಂಬಾ ಉತ್ತಮ.ಸಹಬಾಳ್ವೆ ಅವನಿಗೆ ತಿಳಿದಿರಬೇಕು.ಒಂದು ಕುಟುಂಬದ ಮನೆಯಲ್ಲಿ ಬಡವ ಶ್ರೀಮಂತ ಎರಡು ವರ್ಗದ ಜನರೂ ಇರುತ್ತಾರೆ.ಹಾಗೆ ಇರುವಾಗ ಯಾರಿಗೂ ತಾರತಮ್ಯ ಮಾಡದೇ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದರೆ ತುಂಬಾ ಉತ್ತಮ.ವಂತಿಗೆ ವಿಚಾರದಲ್ಲಿ ಈ ಇಬ್ಬರನ್ನು ಯಾವತ್ತಿಗೂ ಒಂದೇ ತಕ್ಕಡಿಯಲ್ಲಿ ತೂಗಬಾರದು.
ಅವನ ಅನುಕೂಲ ನೋಡಿ ವಂತಿಗೆ ಬರೆಯಬೇಕು.
ಕುಟುಂಬಿಕರ ಕೈಯಿಂದ ಕೇವಲ ಹಣವಂತಿಗೆ ಪಡೆದು ದೈವ ದೇವರ ಕಾರ್ಯವನ್ನು ಗಮ್ಜಾಲ್ ಮಾಡಿ,ಕೈತೊಳೆದುಕೊಂಡು ಕುಳಿತು ಮತ್ತೆ ಬರುವ ಕಾಲಾವಧಿ ಉತ್ಸವಕ್ಕೆ ವಂತಿಗೆ ಸಂಗ್ರಹಕ್ಕೆ ಕಾದು ಕುಳಿತರೆ ಕುಟುಂಬದ ಮನೆಗೆ ಬರುವ ಕುಟುಂಬಿಕನ ಆಸಕ್ತಿಯೂ ಕುಂಟಿತ ಅಗುತ್ತದೆ.ವರ್ಷ ಇಡೀ ಕುಟುಂಬದ ಯುವಸದಸ್ಯರನ್ನು ಒಗ್ಗೂಡಿಸಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ, ಕ್ರೀಯಾಶೀಲವಾಗಿದ್ದರೆ ತುಂಬಾ ಉತ್ತಮ.ಕುಟುಂಬದ ಮನೆಯನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು.
ಹಾಗೆಯೇ ಬಂಧುಗಳಲ್ಲಿ ಒಂದು ವಿನಂತಿ ಏನೆಂದರೆ ಕುಟುಂಬದ ಮನೆ ಎಂಬುವುದು
 ಪ್ರತಿಯೊಬ್ಬ ಕುಟುಂಬಿಕನು ಒಂದು ದಿನ ಕುಟುಂಬದ ಮನೆಗೆ ಬಂದು ಕೈಮುಗಿದು ಅಲ್ಲಿನ ದೃಶ್ಯಗಳನ್ನು ಮೊಬೈಲ್ ವಿಡಿಯೋ ತೆಗೆದುಕೊಂಡು ಸ್ಟೆಟಸ್ ಹಾಕುವ ತಾಣ ಅಗಬಾರದು.ಅದು ನಮ್ಮ ಹಿರಿತನವನ್ನು ಉಳಿಸಿಕೊಂಡು ನಮ್ಮ ಕುಟುಂಬದ  ಮನೆತನದ ಗೌರವ ಇತಿಹಾಸ ಹಿನ್ನಲೆಯನ್ನು ಉಳಿಸಿಕೊಂಡು ಬಂದ ದೇಗುಲವಾಗಬೇಕು.
ನಾವು ಈಗಲೂ ಗಮನಿಸಿದಬಹುದಾದ ಸಂಗತಿ ಏನೆಂದರೆ,
ಕೆಲವೊಬ್ಬರಿಗೆ ಕುಟುಂಬದ ಸಿಗದೇ ಹುಡುಕಾಟದಲ್ಲಿ ಇರುವವರನ್ನು ಕಂಡಿದ್ದೆವೆ.
ಕೆಲವೊಬ್ಬರಿಗೆ ಕುಟುಂಬದ ಮನೆ ಇದ್ದರೂ ಅಸ್ತಿ ಕಲಹದಲ್ಲಿ ಅ ಮನೆ ಅಜೀರ್ಣ ಸ್ಥಿತಿಯನ್ನು ಹೊಂದಿರುವುದನ್ನು ನೋಡಿದ್ದೆವೆ.
ಕುಟುಂಬದ ಮನೆ ಇದ್ದು ಕುಟುಂಬಿಕರು ಇಲ್ಲದೇ ಅನಾಥವಾದ ಕುಟುಂಬದ ಮನೆಯನ್ನು ಕಂಡಿದ್ದೆವೆ.
ಕುಟುಂಬದ ಮನೆ ಮತ್ತು ಕುಟುಂಬಿಕರು ಎರಡು ಇದ್ದು ಅವರು ಬಡವರಾಗಿ,ಅನಾನುಕೂಲವಂತರಾಗಿ ಇದ್ದೂ,ಯಾವುದೊ ಕಾರಣದಿಂದ ಅಲ್ಲಿ ದೈವಗಳು ಅಸ್ತವ್ಯಸ್ತತೆ ಇರುವುದನ್ನು ಕಾಣುತ್ತೇವೆ.
ಕುಟುಂಬದ ‌ಮನೆ ಇದ್ದು ಅಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುವಾಗ ನಾನು ಹೋಗದಿದ್ದರೂ,ನಾನಗ್ಯಾವ ದೈವ ಭಾದೆಯೂ ಇಲ್ಲ ಎಂದು ಮನೆಯಲ್ಲಿ ಕುಳಿತ ಕುಟುಂಬಿಕರನ್ನು ಕಾಣುತ್ತೇವೆ.
ಕುಟುಂಬದ ಮನೆ ಇದ್ದು, ಹಣವಂತರಿದ್ದೂ,ಅಗರ್ಭ ಶ್ರೀಮಂತರಿದ್ದೂ ಅ ಕಡೆ ತಲೆ ತಿರುಗಿಸಿ ನೋಡದವರನ್ನು ಕೂಡ ನಾವು ಕಾಣಬಹುದು.
ಅದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಇರುವವರ ನಡುವೆ ನಮಗೆ ಇರುವ ಕುಟುಂಬದ ಮನೆಗೆ ತಪ್ಪಾದೇ  ಬನ್ನಿ,ದೈವ ದೇವರ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು,ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ.
ದೈವಗಳ ಬಗ್ಗೆಯೂ,ತಮ್ಮ ಕುಟುಂಬದ ಹಿನ್ನಲೆಯ ಬಗ್ಗೆಯೂ ಹಿರಿಯರಲ್ಲಿ ಚೆನ್ನಾಗಿ ತಿಳಿದುಕೊಂಡು ದೈವ ದೇವರ ಮತ್ತು ಕುಟುಂಬದ ಗುರುಕಾರ್ನವರ ಅನುಗ್ರಹಕ್ಕೆ ಪಾತ್ರರಾದ್ರೆ ಮಾತ್ರ ಕುಟುಂಬದ ಮನೆ ಹಳೆಯ ಕಾಲದಲ್ಲಿದ್ದ ಘನತೆ,ಗೌರವದಿಂದ ಮತ್ತು ಕುಟುಂಬದ ಕಾರ್ಯಕ್ರಮ ಸಹಬಾಳ್ವೆಯಿಂದ ಮುನ್ನಡೆಯುತ್ತದೆ.
🙏🏽🙏🏽🙏🏽🙏🏽
Share on :

SUDDI

 

Copyright © 2011 Tuluworld - All Rights Reserved