Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ದೈವಾಚರಣೆಯ ಮೂಲಕ್ರಮ ಏನು ?

ದೈವಾಚರಣೆಯ ಮೂಲಕ್ರಮ ಏನು ? ಈಗ ವೈದೀಕರಣವಾಗಿದೆಯಾ ಎಂದು ಕೇಳಿದರೆ ...!

ಉತ್ತರಕ್ಕೆ ದಿಕ್ಕಿಗೆ ಬಾಗಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಭೂಮಿಗೆ ಸ್ಪರ್ಶ ಆಗದಂತೆ ಕಿತ್ತು , ಅದನ್ನ ಸಿಪ್ಪೆ ಬಿಡಿಸದೆ ಶುದ್ಧ ಬಾವಿಯ ನೀರಿಂದ ತೊಳೆದು ರುಂದನದ ಕಟ್ಟೆ ಅಥವಾ ತುಳಸಿಕಟ್ಟೆಯ ಮುಂದೆ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆ ಕೊಡಿ ಇರಿಸಿ ತದನಂತರ ಆ ತೆಂಗಿನಕಾಯಿಯ ಸಣ್ಣ ಸಿಪ್ಪೆ ತೆಗೆದು ಜುಟ್ಟು ಮಾಡಿ ಬಾಳೆ ಎಲೆಯ ಮೇಲೆ ಇಡಲಾಗುತ್ತದೆ.

ನಂತರ ಊರಿನಲ್ಲೇ ಸಿಗುವ ಕಾಡ ಕೇಪುಲ ಹೂವನ್ನು ಅದಕ್ಕೆ ಹಾಕಿ, ಯಾವ ದೈವವನ್ನ ನಮಗೆ ನಂಬಬೇಕಿದೆಯೋ ಅದರ ಹೆಸರನ್ನ ಕರೆದು ಉದಾಹರಣೆಗೆ ಸ್ವಾಮಿ ಪಂಜುರ್ಲಿ ಅಥವಾ ಸ್ವಾಮಿ ಜಿಮಾದಿ ಎಂದು ಕರೆದು ಮದಿಪುವಿನ ಮೂಲಕ ದೈವವನ್ನ ಆ ತೆಂಗಿನಕಾಯಿಗೆ ಆಕರ್ಷಣೆ ಮಾಡಲಾಗುತ್ತದೆ. ಇಲ್ಲಿ ರಾಜಂದೈವವಾದರೆ ಎರಡು ತೆಂಗಿನಕಾಯಿ ಹಾಗೂ ಬೇರೆ ದೈವವಾದರೆ ಒಂದು ತೆಂಗಿನಕಾಯಿ.ಗುಳಿಗ ಸುಲಭದಲ್ಲಿ ಬರುವವನಲ್ಲದ ಕಾರಣ ಆತನಿಗೆ ಜೊತೆಯಲ್ಲಿ ಒಂದು ಕರ್ಕ್ ಪುಳಿಯನ್ನ ಇಡಲಾಗುತ್ತದೆ.

ನಂತರದಲ್ಲಿ ದೈವಕ್ಕೆ ಆವೇಶ ಬರಿಸುವ ಪೂಜಾರಿಯನ್ನ ಕರೆದು ಆತನಿಗೆ ಮನೆಯ ಅಥವಾ ಊರ ಹಿರಿಯರು ಎಣ್ಣೆ ನೀಡಿ ನಂತರ , ಒಂದು ಇಡೀಯ ಅಡಕೆ ಹಿಂಗಾರ ನೀಡಿ ಆತನ ಮೇಲೆ ಜೋಗ (ದರ್ಶನ) ಬರುವಂತೆ ಮಾಡಲಾಗುತ್ತದೆ‌. ಆ ದರ್ಶನದಲ್ಲಿ ದೈವ ಅಲ್ಲಿಗೆ ಬಂದಿರುವ ಬಗ್ಗೆ ಖಾತರಿಪಡಿಸಲಾಗುತ್ತದೆ. ನಂತರ ಜೋಗದ ಮಾಣಿಯ ಮೂಲಕ ದೈವದಲ್ಲಿ ಅರಿಕೆ ಮಾಡಿ, ದೈವಕ್ಕೆ ಮನೆಮಂಚವಿನ ಮೂಲಕ ಆರಾಧನೆಯೋ ಅಥವಾ ಕಲ್ಲಿನ ಮೂಲಕ ಆರಾಧನೆ ಮಾಡಬೇಕೋ ಎಂದು ಕೇಳಲಾಗುತ್ತದೆ. ನಂತರ ಆ ಶಕ್ತಿ ಕಾಯ ಬಿಟ್ಟು ಪುನಃ ತೆಂಗಿನಕಾಯಿಗೆ ಸೇರುತ್ತದೆ. ಜೋಗ ಭರಿಸಲು ಶಕ್ತರಿಲ್ಲದ ಬಡವರು ಕೇವಲ ಪ್ರಾರ್ಥನೆಯ ಮೂಲಕವೇ ಆ ವಿಧಿಯನ್ನ ಪೂರೈಸುತ್ತಿದ್ದರು.

ನಂತರದಲ್ಲಿ ಒಂದು ಸಣ್ಣ ತೆಂಗಿನಗರಿಯ ಕೊಟ್ಯ ( ತೆಂಗಿನ ಗರಿಯಿಂದ ನಿರ್ಮಿಸಿದ ಕೋಣೆಯಲ್ಲಿ ) ಅಥವಾ ಹಾಲು ಬರುವ ಮರದಲ್ಲಿ  ಆ ತೆಂಗಿನಕಾಯಿಯನ್ನ ನೇತಾಡಿಸಿ ದೈವಕ್ಕೆ ಪ್ರಾರ್ಥನೆ ಮಾಡುತ್ತಾ ನಂಬಲಾಗುತ್ತದೆ. ನಂತರ ಅನುಕೂಲವಾದಾಗ ಒಳ್ಳೆಯ ದಿನ ನಿರ್ಧರಿಸಿ ದೈವಕ್ಕೆ ಮುಗ,ಖಡ್ಸಲೆ ನಿರ್ಮಾಣ ಮಾಡಿ ನಂತರ ಅದನ್ನ ಮನೆಗೆ ತಂದು ತುಳಸಿಕಟ್ಟೆಯ ಎದುರಿರಿಸಿ ಅದರ ಮೇಲೆ, ಭತ್ತ ಚೆಲ್ಲಿ ತೆಂಗಿನಕಾಯಿ ಇರಿಸಿ ನಂತರ ಬಟ್ಟೆಯಿಂದ ಮುಚ್ಚಿ ಇಡಲಾಗುತ್ತದೆ.

ಆ ಬಟ್ಟೆ ಯಾವುದು ಗೊತ್ತೇ ? ಹೆಣಕ್ಕೆ ಹೊದಿಸಲಾದ ಬಟ್ಟೆಯನ್ನ ಸ್ಮಶಾನದಿಂದ ಹಿಂದಿರುಗಿಸಿ ತಂದು ಅದನ್ನ ಮಡಿವಾಳರು ಸೆಗಣಿ‌ ನೀರಲ್ಲಿ ಒಂದುದಿನ ಅದ್ದಿಟ್ಟು ಶುದ್ಧಗೊಳಿಸಿ ನಂತರದಲ್ಲಿ ಆ ಬಟ್ಟೆಯನ್ನು ದೈವಗಳ ಕಲಶ ಪ್ರತಿಷ್ಠೆಯ ದಿನ ಮುಗ,ಖಡ್ಸಲೆ ,ಗಂಟೆ ಮುಚ್ಚಲು ಹಾಗೂ ಜೀಟಿಗೆಯ ಬಟ್ಟೆಯಾಗಿ ಬಳಸುತ್ತಿದ್ದರು. ತುಳುನಾಡಲ್ಲಿ ಮಡಿವಾಳರಿಗೆ ದೈವಸ್ಥಾನದಲ್ಲಿ ಅರ್ಚಕರ ಸ್ಥಾನ. ತುಳುವರ ಹುಟ್ಟು ಸಾವು ಹಾಗೂ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಮಡಿವಾಳ ಜನಾಂಗದ ಪಾತ್ರ ದೊಡ್ಡದು , ಅವರನ್ನ ಶುದ್ಧದ ದಲ್ಯಂತೆರ್ ಎಂದು ಕರೆಯಲಾಗುತ್ತದೆ.

ಶಾಶ್ವತವಾಗಿ ದೈವವನ್ನು ನೆಲೆಯಾಗಿಸಲು ಮರುದಿನ ಪಂಚಭೂತಗಳಿಗೆ ದೈವಸ್ಥಾನದಲ್ಲಿ ಪಂಚ ತ್ರಿಕೋನವನ್ನ ದೈವದ ಪೂಜಾರಿಗಳು ಬಿಡಿಸುತ್ತಾರೆ. ಶೇಡಿ ಹುಡಿ ಬಳಸಿ ಮಂಡಲ ಬರೆದು, ಅದರಮೇಲೆ ಕಲಶವಿರಿಸಲಾಗುತ್ತದೆ. ದೈವ ಸ್ಥಾನದ ಒಕ್ಕೆಲ್ಗೆ ಮೂರು, ಐದು ಅಥವಾ ಗರಿಷ್ಠ ಒಂಭತ್ತು ಕಲಶಗಳು ಮಾತ್ರ ಅದಕ್ಕಿಂತ ಮೇಲಿನ ಕಲಶವೆಲ್ಲಾ ದೇವರಿಗೆ. 

ಈ ಕಲಶವನ್ನ ಪ್ರತಿಷ್ಠಾಪಿಸಿ ನಂತರದಲ್ಲಿ ಮನೆಮಂಚವು ಅಥವಾ ಕಲ್ಲಿನ ಮೇಲೆ ಕಲಶಶುದ್ಧಿ ಮಾಡಲಾಗುತ್ತದೆ.ಇದೆಲ್ಲವನ್ನು ಮಾಡುವುದು ನೇಮಿತ ಪೂಜಾರಿಯೇ ಹೊರತು ಬ್ರಾಹ್ಮಣರಲ್ಲ , ದೈವಕ್ಕೆ ಹೋಮ ಇಡುವುದು ಕೂಡಾ ಪೂಜಾರಿ. ಬಿಡಿಸಿದ ತ್ರಿಕೋನಗಳ ಮುಂದೆ ಒಂದು ಸೀಯಾಳ ಇಡಲಾಗುತ್ತದೆ ಅದು ಭೂತಗಳ ಅಧಿಪತಿ ತುಳುನಾಡ ಬೆರ್ಮೆರಿಗೆ. ಬಾಳೆ ಎಲೆಯಲ್ಲಿ ಅಕ್ಕಿ ಹಾಗೂ ತೆಂಗಿನಕಾಯಿ ಬಡಿಸಿ ಇಡುವುದು ತುಳುವರ ಆದಿದೇವ ಬಾಮಕುಮಾರನಿಗೆ. ಕಲಶದ ಜೊತೆ ಕೇಪುಲ ಹೂ, ತುಳಸಿ ದಳ ,ತುಂಬೆ ಹೂ, ಪಿಂಗಾರ , ಗರಿಕೆ ಕೊಡಿ ಹಾಗೂ ಮಾವಿನಕೊಡಿ ,ಹಲಸಿನಕೊಡಿ ಬಳಸಲಾಗುತ್ತದೆ ಹಾಗೂ ಕಲಶಕ್ಕೆ ಹಾಲು,ಶುದ್ಧ ಬಾವಿಯ ನೀರು, ತುಪ್ಪ ಹಾಗೂ ಎಳನೀರು ತುಂಬಲಾಗುತ್ತದೆ. 

ಕಲಶವನ್ನ ಭೂತೊಕ್ಕೆಲು ಮಾಡುವ ದಿನ ಈ ಮುಗಮೂರ್ತಿ ಇಡಲಾದ ಜಾಗಕ್ಕೆ ತಂದು ಅದರ ಮೇಲೆ ಪ್ರೋಕ್ಷಿಸಿ ಜೊತೆಗೆ ಕುರ್ದಿನೀರು ಪ್ರೋಕ್ಷಿಸಿ , ತೆಂಗಿನಕಾಯಿಯನ್ನ ಒಡೆದು ಶಕ್ತಿಯನ್ನು ಮುಗಕ್ಕೆ ವರ್ಗಾಯಿಸಲಾಗುತ್ತದೆ. ನಂತರ ದೈವದ ಪಾತ್ರಿಗೆ ಜೋಗ ಭರಿಸಲಾಗುತ್ತದೆ ಆ ಸಂಧರ್ಭದಲ್ಲಿ ಕುಟುಂಬಿಕರ ಮಧ್ಯೆ ಅಥವಾ ಊರವರ ಮಧ್ಯೆ ಯಾವುದಾದರೂ ನ್ಯಾಯದ (ಭಿನ್ನಾಭಿಪ್ರಾಯ) ವಿಚಾರವಿದ್ದರೆ ಅದನ್ನೆಲ್ಲಾ ಪರಿಹರಿಸಿ ನಂತರ ಜೋಗದ ಅಂದರೆ ದರ್ಶನದ ಮೂಲಕ ಪೂಜಾರಿ ಆ ಪರಿಕರಗಳನ್ನ ಒಳಗಿರುವ ಮನೆಮಂಚಾವಿಗೆ ತಂದು ಇರಿಸುತ್ತಾರೆ  ಇದನ್ನ ಒಟ್ಟಾಗಿ ದೈವಮಂಡಲ ಅನ್ನುತ್ತಾರೆ.ಅಲ್ಲಿಗೆ ದೈವದ ಪ್ರತಿಷ್ಠೆ ಮುಗಿಯಿತು.

 ಇಲ್ಲೆಲ್ಲೂ ಬ್ರಾಹ್ಮಣರ ಉಪಯೊಗ ಬರುವುದೇ ಇಲ್ಲ. ದೈವಾರಾಧನೆಗೆ ಮುಗ ಸೇರಿಕೊಂಡಿದ್ದು ವಿಶ್ವಕರ್ಮ ಸಮುದಾಯ ತುಳುನಾಡಿಗೆ ಬಂದಮೇಲೆ ಅದರ ಮೊದಲು ಮುಗವಿಲ್ಲದೇ ಕೇವಲ ತೆಂಗಿನಕಾಯಿಯ ಮೂಲಕವೇ ಹಾಗೂ ಕಲ್ಲಿನ ಮುಖಾಂತರ ಆರಾಧನೆ ನಡೆಯುತ್ತಿತ್ತು ಅದು ಒಂದರ್ಥದ ಪ್ರಕೃತಿಯ ಆರಾಧನೆ. ತೆಂಗಿನಕಾಯಿಯ ಸಿಪ್ಪೆಗೆ ಎಣ್ಣೆ ಹಾಕಿ ಹೊಗೆ ಏಳಿಸಿ ಧೂಪ ನೀಡಲಾಗುತ್ತಿತ್ತು.ತಾಸೆ ,ಡೋಲು ಸೇರಿಕೊಂಡಿದ್ದು ಕೂಡಾ ನಂತರದಲ್ಲಿ ಮೊದಲು ಕೇವಲ ತೆಂಬರೆ ಮಾತ್ರ ಕೋಲಕ್ಕೆ ಬಳಕೆಯಾಗುತ್ತಿತ್ತು, ಈಗೀಗ ಬಂಗಾರದ ,ಬೆಳ್ಳಿಯ ಅಣಿ ,ಲೋಹದ ಪರಿಕರಗಳು ಸೇರಿಕೊಂಡಿವೆಯಾದರೂ ಮೊದಲು ದೈವಾರಾಧನೆ ಅನ್ನುವುದು ಬಹಳ ಸಿಂಪಲ್ ಆಗಿದ್ದು ಯಾವ ಬಡವನೂ ಆರಾಧಿಸುವ ಸ್ಥಿತಿಯಲ್ಲಿತ್ತು.

ಇತ್ತೀಚಿಗೆ ಅಂದರೆ ದೈವಾರಾಧನೆಯ ಬಗ್ಗೆ ಅರಿವಿಲ್ಲದ ಜನ ಯಾವಾಗ ತಾಂಬೂಲ ಪ್ರಶ್ನೆ ಇಡಲು ಶುರು ಮಾಡಿದರೋ ಅಂದಿನಿಂದ ಸ್ವಲ್ಪ ಹಳಿತಪ್ಪಲು ಶುರುವಾಗಿದೆ.ತುಳುನಾಡಲ್ಲಿ ತಾಂಬೂಲ ಪ್ರಶ್ನೆ ಇಡುವುದಕ್ಕೆ ಒಂದು ನಿರ್ಧಿಷ್ಟ ವರ್ಗಕ್ಕೆ ಅಂದರೆ ಬಲ್ಯಾಯರಿಗೆ ಮಾತ್ರ ಅಧಿಕಾರವಿತ್ತು ಆದರೆ ಇಂದು ಜ್ಯೋತಿಷ್ಯ ಕಲಿತ ಬ್ರಾಹ್ಮಣರೂ ಜೊತೆಗೆ ಕೇರಳದ ತೈಯಂ ಆಚರಣೆ ಕಂಡ ಪೊದುವಾಳರು ಪ್ರಶ್ನೆ ಇಡಲು ಶುರುಮಾಡಿದ್ದರಿಂದ ಹಾಗೂ ಹಿರಿಯ ತುಳುವರ ಸಲಹೆ ಸ್ವೀಕರಿಸಲು ಅವರು ನಿರಾಕರಿಸಿದ್ದರಿಂದ ಅದು ದಾರಿತಪ್ಪಲು ಶುರುವಾಯಿತು , ಪೊದುವಾಳರಿಂದ ಪ್ರಶ್ನೆ ಇಟ್ಟ ಜಾಗದಲ್ಲಿ , ದೈವಾರಾಧನೆ ತೈಯಂ ಹಾಡಿ ಹಿಡಿದಿದೆ ಹಾಗಾಗಿ ಕೆಲ ಮೂಲ ತುಳುವರ ಬಾಯಲ್ಲಿ ವೈದೀಕರಣ ಎಂಬ ಶಬ್ದ ಕೇಳಿಬರುತ್ತದೆ. ಇದು ಕೆಲವೇ ಕೆಲವು ಜ್ಯೋತಿಷಿಗಳ ಜೊತೆಗೆ ಪೊದುವಾಳರ ತಪ್ಪಾದರೂ ದೂಷಣೆ ಹೊತ್ತುಕೊಳ್ಳಬೇಕಾದ ಕರ್ಮ ಬ್ರಾಹ್ಮಣ ಸಮುದಾಯದ್ದು ಆಗಿದೆ ಇದು ಹೇಗೆ ಅಂದರೆ ಇಲ್ಲಿ ದೀಕ್ಷಿತ್ ಯಾರಿಗಾದರೂ ಬೈದರೆ ಅದಕ್ಕೆ ಶೆಟ್ಟಿಗಾರ ಸಮುದಾಯ ಹೊಣೆ ಎಂಬಂತೆ !

ಹಿಂದೆ ದೇವಸ್ಥಾನವನ್ನು ಮೂಲದಿಂದ ತಂದು ಬೇರೆಡೆ ನಂಬಬೇಕಿದ್ದರೆ ಅಥವಾ ದೈವಸ್ಥಾನವನ್ನ ಜೀರ್ಣೋದ್ಧಾರ ಮಾಡಬೇಕಿದ್ದರೆ "ದೈವಮಂಡಲ" ಮಾಡುವ ಕ್ರಮವಿತ್ತಂತೆ. ಮೂಲದಿಂದ ಯಾಕೆ ಬದಲಾವಣೆ ಮಾಡ್ತಾರೆ ಅಂದರೆ ಉದಾಹರಣೆಗೆ ಪಣಂಬೂರಿನ ಹಾರ್ಬರ್ ನಿರ್ಮಾಣ ವೇಳೆ ವೀರಭದ್ರ ದೇವಸ್ಥಾನವನ್ನ ಸಿದ್ಧಕಟ್ಟೆಗೆ ಸ್ಥಳಾಂತರಗೊಳಿಸುವಾಗ ಅಲ್ಲಿನ ವಿಗ್ರಹದ ಪ್ರಾಣ ವರ್ಗಾವಣೆಯನ್ನ ವೈದಿಕ ವಿಧಾನಗಳಲ್ಲಿ ಮಾಡಲಾಯಿತು, ದೈವವನ್ನ ಜಾಗದ ಮಣ್ಣು ತೆಗೆದುಕೊಂಡು ಹೋಗುವ ಕ್ರಮದಲ್ಲಿ ಹೋದರೂ, ದೈವ ಮಾತ್ರ ಹೋಗಲು ಕೇಳಲೇ ಇಲ್ಲ .ಅಲ್ಲಿ ದೈವಮಂಡಲ ಮಾಡಿದ್ದರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ ಆದರೆ ಇಂದಿಗೂ ಜುಮಾದಿಬಂಟ ತನ್ನ ಇರುವಿಕೆಯನ್ನ ಹಾರ್ಬಾರ್ ಒಳಗಡೆ ತೋರಿಸಿದ್ದಾನೆ.

ನಾಗಮಂಡಲ ಯಾವಾಗಿನಿಂದ ಶುರುವಾಯಿತು ಎಂಬ ಬಗ್ಗೆ ನಾನು ಯಾರಲ್ಲೂ ಕೇಳಿದರೂ ಮಾಹಿತಿ ಸಿಗಲಿಲ್ಲ ಹಾಗಾಗಿ ನನಗೆ ಆ ಆಚರಣೆಯ ಬಗ್ಗೆ ಅಷ್ಟೊಂದು ಒಲವು ಇಲ್ಲ ಆದರೆ ಕಾಡ್ಯನಾಟ ಅಥವಾ ಬಡಗು ದಿಕ್ಕಲ್ಲಿ ನಡೆಯುವ ಮಂಡ್ಲಭೋಗ ಅಥವಾ ಢಕ್ಕೆಬಲಿಯ ರೂಪಾಂತರವೇ ನಾಗಮಂಡಲ ಅನ್ನಲಾಗುತ್ತದೆ. ತುಳುವರಿಗೆ ನಾಗನೂ ದೈವ ಆಗಿರುವುದರಿಂದ ಆತನಿಗೆ ನಾಗದರ್ಶನ ಮಾಡುತ್ತಾರೆ ಹಾಗೂ ಆತನಿಗೆ ತನು ತಂಬಿಲ ನೀಡುವ ಕ್ರಮವಿತ್ತು ಆದರೆ ಕಾಲ ಕಳೆದಂತೆ ಅದು ನಾಗನ ಕಲ್ಲಿಗೆ ಹಾಲೆರೆಯುವ ಕ್ರಮವಾಗಿ ಬದಲಾವಣೆ ಆಯಿತು.

ದೈವಮಂಡಲ ಹಾಗೂ ದೈವಹೋಮ ಮರೆಯಾಗಿ ಬ್ರಹ್ಮಕಲಶ ಹಾಗೂ ಗಣಹೋಮ ಮಾಡಲು ಶುರುಮಾಡಿದ್ದು ತುಳುವರು ತಮ್ಮ ಮೂಲಾಚರಣೆಯನ್ನು ಮರೆಯುವಂತಾಯಿತು. ಈಗ ದೈವಮಂಡಲ ಯಾರಿಗೆ ಗೊತ್ತಿದೆ ಎಂದರೆ ಗ್ರಾಮೀಣ ಭಾಗದಲ್ಲಿರುವ ಕೆಲವೇ ಕೆಲವು ಜನಗಳಿಗೆ ಮಾತ್ರ ಇದನ್ನು ಯಾರಾದರೂ ಅಧ್ಯಯನ ಮಾಡಿ ಮುಂದುವರಿಸಿದರೆ ಮಾತ್ರ ಮುಂದಿನ ಜನಾಂಗಕ್ಕೂ ಮಾಹಿತಿ ಸಿಗಬಹುದು.

ದೈವಕ್ಕೆ ಹೋಮ ಶೇಡಿಯ ರಂಗೋಲಿ ಹಾಕಿ ಹಲಸಿನ ಕಟ್ಟಿಗೆಯಲ್ಲಿ ಇಡುವುದನ್ನ  ನಾನು ಸಣ್ಣಂದಿನಲ್ಲಿ ನೋಡಿದ್ದೆ ಈಗ ಬಹುತೇಕ ಕಡೆ ಗಣಹೋಮವಾಗಿ ಬದಲಾಗಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ದೈವದ ಮುಗಕ್ಕೆ ಆರತಿ ಬೆಳಗಲು ಶುರುಮಾಡಿದ್ದಾರೆ ಅದು ಕೂಡಾ ಅರ್ಚಕರಿಂದ ಆರತಿಗಳು ಆಗುತ್ತಿವೆ. ಅಸಲಿಗೆ ದೈವಕ್ಕೆ  ಧೂಪ ಮಾತ್ರ ಎತ್ತಲು ಅವಕಾಶವಿರುವುದು ಅದರೆ ಈಗ ಆರತಿ ಹಿಡಿಯಲು ಶುರುಮಾಡಿದ್ದಾರೆ. 

 ಪ್ರಾಣಪ್ರತಿಷ್ಟಾಪನೆ ಮೂಲಕ ಕೂರಿಸಲಾದ ದೇವರ ವಿಗ್ರಹದ ಸುತ್ತ ಇರುವ ಚೈತನ್ಯವನ್ನ ಆರತಿಗೆ ಆಕರ್ಷಿಸಿ ಅದನ್ನ ಅಂಗೈ ಮೂಲಕ ಧನಾತ್ಮಕ ಶಕ್ತಿ ನಮ್ಮ ದೇಹ ಸೇರುವಂತೆ ಮಾಡಲು ಆರತಿ ಎತ್ತುವುದು ಆದರೆ ದೈವದ ಶಕ್ತಿ ಇರುವುದು ಆ ಮಣ್ಣಲ್ಲಿ. ಮುಗ ದೈವಾಭರಣವಾದರೂ ಅದಕ್ಕೆ ವಿಶೇಷ ಸಂಧರ್ಭದಲ್ಲಿ ಮಾತ್ರ ದೈವ ಆವಾಹನೆಯಾಗುವಂಥದ್ದು ಹಾಗಾಗಿಯೇ ದೈವದ ಮುಗಗಳನ್ನ ಭಂಡಾರಮನೆಯಲ್ಲಿ ಇಟ್ಟು , ಉತ್ಸವ ಸಂಧರ್ಭದಲ್ಲಿ ಭಂಡಾರ ಮೆರವಣಿಗೆ ಮೂಲಕ ಸಾಗಿ , ದೈವಸ್ಥಾನ ಸೇರುವ ಕ್ರಮ ಇರುವುದು. ಹಾಗಾಗಿ ಆರತಿ ಎತ್ತುವ ಕ್ರಮ ಎಷ್ಟು ಸರಿ ಅಂತಾ ನೀವೇ ಯೋಚಿಸಿ.

ಉಜೆ ಭಸ್ಮ ಪ್ರೋಕ್ಷಣೆ ಮಾಡಿ ದೈವಸ್ಥಾನವನ್ನ ಮಡಿವಾಳರು ಶುದ್ಧ ಮಾಡುತಿದ್ದರು ಅದೇ ರೀತಿ ದೈವಕ್ಕೆ ಧೂಪ ಎತ್ತುವ ಅಧಿಕಾರ ದೈವಕ್ಕೆ  ನೇಮಿತ ಪೂಜಾರಿಗೆ ಮಾತ್ರ ,ಆದರೆ ಆಪತ್ಕಾಲದಲ್ಲಿ ಶುದ್ಧಾಚಾರದಲ್ಲಿರುವ ಬಿಲ್ಲವ ಸಮುದಾಯದ ವ್ಯಕ್ತಿಗೆ ಯಾವುದೇ ದೈವಕ್ಕೆ ಸೇವೆ ಮಾಡುವ ಅಧಿಕಾರ ಇರುತ್ತದೆ ಆದರೆ ಕೆಲವು ಕಡೆ ಬ್ರಾಹ್ಮಣರು ಅಂದರೆ ವೇದಮೂರ್ತಿಗಳಾದ ಗ್ರಾಮದ ತಂತ್ರಿಗಳ ಹೊರತಾಗಿ ದೈವಸ್ಥಾನದ ಒಳಗಡೆ ಹೋಗುತ್ತಿರುವುದು ನಿಜಕ್ಕೂ ತುಳುವರ ನಂಬಿಕೆಗೆ ವಿರುದ್ಧ. ಮೂಲ್ಯ ವರ್ಗಕ್ಕೆ , ಪೂಜಾರಿ ವರ್ಗಕ್ಕೆ  ,ಮಡಿವಾಳ ವರ್ಗಕ್ಕೆ ಎಲ್ಲರಿಗೂ ಅವರದೇ ಆದ ಜವಾಬ್ದಾರಿಗಳಿವೆ ಅದನ್ನು ಯಾರಾದರೂ  ಬದಲಾಯಿಸುವುದು ಹಿತವಲ್ಲದ ವಿಚಾರ.

ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ ಆದರೆ ಇರುವುದನ್ನ ಇರುವ ಹಾಗೆ ಹೇಳಿದ್ದೇನೆ. ನನ್ನ ಕುಟುಂಬದಲ್ಲಿ ದೈವಗಳಿವೆ ಆದರೆ ನಾನು ಕೂಡಾ ನೂಲು ಹಾಕುವ ವರ್ಗದವ , ಮೂಲ ತುಳುವರಲ್ಲಿ ನಾನೂ ಬರುವುದಿಲ್ಲ ಯಾಕೆಂದರೆ ಮೂಲ ತುಳುವರ ಪಧ್ಧತಿ ಅಳಿಯಕಟ್ಟು ನಾವು ಮಕ್ಕಳಕಟ್ಟು ನಂಬಿಕೆಯವರು.ಬ್ರಾಹ್ಮಣರು , ವಿಶ್ವಕರ್ಮ, ಕೊಂಕಣರು ಇವರೆಲ್ಲಾ ಇದೇ ಆಚರಣೆ ಇಟ್ಟುಕೊಂಡವರು ಹಾಗಾಗಿ ಸ್ವಲ್ಪ ಅಧ್ಯಯನ ಮಾಡಿ ಮುಂದಿನ ಡಿಜಿಟಲ್ ಪ್ಲಾಟ್ ಫಾರಂ ನಂಬಿರುವ ತುಳುವ ತಲೆಮಾರಿಗೆ ಸರಿಯಾದ ಮಾಹಿತಿ  ಒದಗಿಸುವ ಪ್ರಯತ್ನ ಮಾಡಿದ್ದೇನೆ. ಆ ಮೂಲ ಆಚರಣೆಗಳನ್ನು ತಮ್ಮ ಕುಟುಂಬ ಸ್ಥಾನದಲ್ಲಿ ಮಾಡಲು ಬಯಸುವಿರಾದರೆ ನಿಮಗೆ ಸೂಕ್ತ ಮಾರ್ಗದರ್ಶಕರ ಮಾಹಿತಿಯನ್ನು ಇನ್ಬಾಕ್ಸ್ ಮೂಲಕ ನೀಡಬಲ್ಲೆ. ನಾನು ಬರೆದದ್ದುರಲ್ಲಿ ತಪ್ಪಿದೆ ಅಂತಾ ಅನಿಸಿದರೆ ಹಿರಿಯರು ತಿದ್ದಬಹುದು. 

ಬರಹ : *ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ*
Share on :

SUDDI

 

Copyright © 2011 Tuluworld - All Rights Reserved