ಪಾಟು ಐಲೇಸಾದ ಮಹತ್ವಾಂಕಾಕ್ಷೆಯ ಹಾಡು .
ನಿನ್ನೆ ಕಟಪಾಡಿಯಿಂದ ಮಂಚ ಕಲ್ಲಿಗೆ ಹೋಗುವ ದಾರಿಯ ಪಾಂಬೂರಿನಲ್ಲಿ ಸುಂದರ ಎಂ ಸಂಜೀವ, ರಮೇಶ್ ಗುಂಡಾವು,ಪಾಂಗಲ ಬಾಬು ಕೊರಗ ಹಾಗೂ ಕಮಲ ಪಾಂಬೂರು ಇವರ ಸಹಕಾರದಲ್ಲಿ ಕೊರಲ್ ಕಲಾ ತಂಡ ಕುಡ್ಲ , ನವೋದಯ ಸಾಂಸ್ಕೃತಿಕ ಕಲಾತಂಡ ಪಾಂಬೂರು ಎಂಬೆರಡು ವಿಶೇಷ ಪರಿಣತಿಯ ನೃತ್ಯ ತಂಡಗಳೊಂದಿಗೆ ಅದ್ಭುತವಾಗಿ ಚಿತ್ರೀಕರಣಗೊಂಡಿದೆ.
ಸೆಪ್ಟೆಂಬರ್ 28ರಂದು ನಿಟ್ಟೆ ಯೂನಿವರ್ಸಟಿಯಲ್ಲಿ ಈ ಹಾಡು ಔಪಚಾರಿಕವಾಗಿ ಬಿಡುಗಡೆಗೊಳ್ಳಲಿದೆ.
ಚಿತ್ರೀಕರಣದುದ್ದಕ್ಕೂ ಮೆಚ್ಚಿಕೊಳ್ಳುವಂತಹುದು ಈ ತಂಡದ ತತ್ಪರತೆ , ನೃತ್ಯ ಕೌಶಲ್ಯ ಮತ್ತು ಅವರೆಲ್ಲಾ ತಮ್ಮ ಭಾಷೆಯ ಬಗ್ಗೆ ಇಟ್ಟುಕೊಂಡಿದ್ದ ಸದಭಿಮಾನ. ಆ ತತ್ಪರತಯಿಂದಲೆ ಮಂಗಳೂರಿನಿಂದ ಉಡುಪಿಗೆ ಬಂದು ಮಳೆಯೊಳಗೆ ನೆಂದು ಈ ತಂಡ ಹಾಡಿನ ತಾಳಕ್ಕೆ ತಕ್ಕ ಹೆಜ್ಜೆ ಹಾಕುವುದು ಸಾಧ್ಯವಾಗಿದೆ!
ನಿರಂತರ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ನಾಗರೀಕ ಸಮಾಜದಲ್ಲಿ ಈ ಆದಿ ಜನಾಂಗ ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸುವ ರೀತಿ ಅನುಕರಣೀಯ . . ಬಾಬು ಕೊರಗ ಅವರ ಬರೆಹದಲ್ಲಿ ಅದು ಮೂಡಿದ ರೀತಿಯಂತೂ ಅನನ್ಯ.
ಅಪ್ಪೆ ಚೂಕ್,ನನತ ಕೊಡಿನ್,ಆಸೆ ಜಿಟ್ಟಿಡ್
(=ತಾಯಿ ತನ್ನ ಕುಡಿಯನ್ನು ಆಶಾ ದೃಷ್ಟಿಯಿಂದ ನೋಡಿದಳು)
ಅನ್ನ ಅಂತ್ಯ ಕಾಲಗೊಂಜಿ ಆಧಾರಾಕತ!
(=ನನ್ನ ಅಂತ್ಯ ಕಾಲಕ್ಕೊಂದು ಆಧಾರವಾಯಿತಲ್ಲ!)
ರಡ್ಡು ಪೊರ್ತು ಗಂಜಿ ತೆಲಿ ಅಂಗ ತರ್ದತ.
(= ಎರಡು ಹೊತ್ತು ಗಂಜಿ ನನಗೆ ಕೊಡುವಳಲ್ವ )
ಪೊನ್ನು ಕೂಜಿ, ಅನ್ನ ಪೆರಂಟ ಬೆರಿಯೆ ಬರ್ದತ||ಅಪ್ಪೆ||
(=ಹೆಣ್ಣು ಮಗಳು ನನ್ನ ಬೆನ್ನ ಹಿಂದೆಯೆ ಕಾಯುವಳಲ್ವ {ಬರುವಳಲ್ವ})
ಭಾಷೆಯ ಶ್ರೀಮಂತಿಕೆ ತಿಳಿಯುವುದೆ ಆ ಭಾಷೆ ಬೆಳೆಸಿಕೊಂಡ ಸಾಮಾಜಿಕ ಪ್ರಜ್ಞೆಯಿಂದ . ಅದು ಕೊರಗ ಭಾಷೆಯಲ್ಲಿ ಪ್ರಕೃತಿದತ್ತವಾಗಿ ವಿಪುಲವಾಗಿದೆ ಎನ್ನುವುದು ಈ ಹಾಡನ್ನು ಗಮನವಿಟ್ಟು ಕೇಳಿದಾಗ ತಿಳಿಯುವ ಸತ್ಯ .
ಮುಗ್ಧ ಸಮುದಾಯದ ಈ ಸಹಜ ದೃಷ್ಟಿ ಇದೆ ರೀತಿಯಲ್ಲಿ ಮುಂದುವರಿಯಲಿ . ಆಧುನಿಕತೆಯ ಮಹಾ ಮಾಯೆ ಅವರನ್ನು ಅತಿಯಾಗಿ ಕಾಡದಿರಲಿ , ಹುಚ್ಚು ಹೊಳೆಯಲ್ಲಿ ತಮ್ಮತನ ಕೊಚ್ಚಿ ಹೋಗದಂತೆ ಕಾಪಿಡಲಿ ಎನ್ನುವ ಆಶಾ ಭಾವದೊಂದಿಗೆ ನಿಮ್ಮಲ್ಲಿಗೆ ಕೂಜಿನ ಪಾಟುವಿನೊಂದಿಗೆ ಬರುತ್ತಿದ್ದೇವೆ!.
ಐಲೇಸಾ ತಂಡದ ಅಜೇಶ್ ಚಾರ್ಮಾಡಿ ಮತ್ತು ಗಾಯಕ ಪ್ರಕಾಶ್ ಪಾವಂಜೆಯವರ ಮುತುವರ್ಜಿಯಲ್ಲಿ ನಡೆದ ಚಿತ್ರೀಕರಣಕ್ಕೆ ಆದಿತ್ಯ ಆಚಾರ್ಯ ಮತ್ತು ಅನೀಶ್ ಕಿನ್ನಿಗೋಳಿ ಸಮರ್ಥವಾಗಿ ಸಾಥ್ ನೀಡಿದರು.
ಐಲೇಸಾ ಸ್ಥಳೀಯ ತಂಡದೊಂದಿಗೆ ಬೆರೆತ ಸಂಭ್ರಮಕ್ಕೆ ಕೊನೆಯಲ್ಲಿ ತಂಡದೊಂದಿಗೆ ಅವರು ಕುಪ್ಪಳಿಸಿದ ರೀತಿಯೇ ಸಾಕ್ಷಿ! .
ಐಲೇಸಾದ ಈ ವಿಶೇಷ ಪ್ರಯತ್ನಗಳಿಗೆ ಚಂದಾದಾರರಾಗುವ ಮೂಲಕ ಸಹಕರಿಸಿ .
- ಶಾಂತಾರಾಮ್ ಶೆಟ್ಟಿ
- *ಟೀಂ ಐಲೇಸಾ*