Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ತುಳುನಾಡು ಮತ್ತು ಕಳರಿ ಮೇ 24ರಂದು ಕಟೀಲಿನಲ್ಲಿ ಚರ್ಚಾ ಗೋಷ್ಠಿ


ಕಟೀಲು: ಜಗತ್ತಿನ ಅತ್ಯಂತ ಪ್ರಾಚೀನ ಯೋಧಕಲೆ 'ತುಳುನಾಡು ಕಲರಿ' ಪುನರುಜ್ಜೀವನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ತುಳುವರ್ಲ್ಡ್ ಫೌಂಡೇಶನ್ ಹಾಗೂ ತುಳುವೆರೆ ಆಯನ ಕೂಟ (ರಿ) ಕುಡ್ಲ ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜ್ ಕಟೀಲ್ ಇವರ ಸಂಯುಕ್ತ ಆಶ್ರಯದಲ್ಲಿ "ತುಳುನಾಡ ಕಲರಿ ಮರುಸೃಷ್ಟಿ ಗೊಳಿಸುವ ಕಾರ್ಯಕ್ರಮಗಳ ಭಾಗವಾಗಿ "ತುಳುನಾಡು ಮತ್ತು ಕಲರಿ" ವಿಷಯಾಧಾರಿತ ಚರ್ಚಾ ಸಮ್ಮೇಳನ ಮೇ 24ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಪದವಿ ಕಾಲೇಜು, ಕಟೀಲಿನಲ್ಲಿ ನಡೆಯಲಿದೆ.

ಪದ್ಮಶ್ರೀ ಡಾ. ಹಾಸನ್ ರಘು, ಬಹುಭಾಷಾ ಚಿತ್ರಗಳ ಸಾಹಸ ನಿರ್ದೇಶಕರು ಹಾಗೂ ಭಾರತೀಯ ಸ್ವದೇಶಿ ಯೋಧಕಲೆಗಳ ಗುರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪೂಜ್ಯ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ, ತುಳುವರ್ಲ್ಡ್ ಫೌಂಡೇಶನ್ ಗೌರವ ಅಧ್ಯಕ್ಷರು, ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಅನುವಂಶಿಕ ಟ್ರಸ್ಟಿ ಶ್ರೀ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಪಾಲ್ಗೊಳ್ಳಲಿದ್ದಾರೆ.

ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸುವ ತಜ್ಞರುಗಳಾದ ಡಾ. ಸತೀಶ್ ಸಿ.ಪಿ., ವಡಗರ – ಯೋಧಕಲೆ ಸಂಶೋಧಕರು, ಶ್ರೀ ಮಹಿತನ್ ಕೆ., ವಡಗರ – ತುಳುನಾಡ ಕಲರಿ ತಜ್ಞ, ಡಾ. ಸಿ. ಗಂಗಾಧರನ್, ಕಣ್ಣೂರು, ಕಳರಿ ನಿಘಂಟು ಮತ್ತು ರಾಮಾಯಣದಲ್ಲಿ ಯೋಧಕಲೆ ಗ್ರಂಥ ಕರ್ತೃ, ಡಾ. ಧನ ಮಹೇಶ್ ಗುರುಗಳು, ಪೂರ್ವಾಚಾರ್ಯ ಕಳರಿ ಮತ್ತು ಮರ್ಮ ಚಿಕತ್ಸಕ ಮಂಗಳೂರು, ಶ್ರೀ ಉಮೇಶ್ ಗೌಡ ಮಾಡತೆಲ್,  ತುಳುನಾಡ ಕಲರಿ ಸಂಶೋಧಕರು ಮೊದಲಾದವರು ಈ ಕಾರ್ಯಕ್ರಮದಲ್ಲಿ ತುಳುನಾಡ ಕಲರಿ  ಕಲೆಯ ಬಗ್ಗೆ ಚಿಂತನ-ಮಂಥನ ನಡೆಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಅಧ್ಯಕ್ಷರು ತುಳುವರ್ಲ್ಡ್ ಫೌಂಡೇಶನ್ ಕಟೀಲು, ಡಾ. ವಿಜಯಾ ವಿ., ಪ್ರಾಂಶುಪಾಲರು, ಎಸ್‌ಡಿಪಿಟಿ ಪದವಿ ಕಾಲೇಜು, ಕಟೀಲು, ಶ್ರೀಮತಿ ಶಮೀನ ಆಳ್ವ ಅಧ್ಯಕ್ಷರು, ತುಳುವೆರೆ ಆಯನ ಕೂಟ (ರಿ), ಡಾ. ರಾಜೇಶ್ ಆಳ್ವ ನಿರ್ದೇಶಕರು, ತುಳುವರ್ಲ್ಡ್ ಫೌಂಡೇಶನ್  ಮೊದಲಾದವರು ಉಪಸ್ಥಿತರಿರುವರು.

ತುಳುನಾಡು ಕಲರಿ ತುಳು ನಾಡಿನ ಪುರಾತನ ಪರಂಪರೆಯ ಯುದ್ಧ ಕೌಶಲ್ಯ, ಸ್ವರಕ್ಷಣೆ, ಮರ್ಮ ಚಿಕಿತ್ಸೆ, ಗಿಡಮೂಲಿಕೆ ಔಷಧಗಳು ಇತ್ಯಾದಿಗಳನ್ನೊಳಗೊಂಡ  ಅತ್ಯಪೂರ್ವ ವಿದ್ಯೆ. ತುಳುನಾಡ ಕಳರಿ ಹಲವು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ.  ಅದರಲ್ಲಿ ಪ್ರಮುಖವಾದದ್ದು ದೈಹಿಕ ವಿದ್ಯೆ, ಮನಶಾಸ್ತ್ರ ವಿದ್ಯೆ, ಸಮರ ವಿದ್ಯೆ, ಮರ್ಮ ಚಿಕಿತ್ಸೆ ಮತ್ತು ಗಿಡಮೂಲಿಕೆ ಚಿಕಿತ್ಸೆ.  ಜಗತ್ತಿನ ಅತ್ಯಂತ ಪುರಾತನ ಯೋಧಕಲೆಗಳಲ್ಲಿ ಒಂದು. ಇದರ ಬೇರುಗಳು ಪ್ರಾಚೀನ ತುಳುನಾಡಿನ ಭಾಗವಾದ ಕಣ್ಣೂರು, ವಡಕರ, ವಯನಾಡು, ದಕ್ಷಿಣ ಕನ್ನಡ ಭಾಗಗಳನ್ನು  ಒಳಗೊಂಡಿವೆ. 

ಇದು ಕೇವಲ ಯುದ್ಧ ಕಲೆ ಅಲ್ಲ – ದೀರ್ಘಕಾಲದ ನೋವು, ಮಾನಸಿಕ ಆರೋಗ್ಯ, ರೋಗನಿರೋಧಕ ಶಕ್ತಿ ಇತ್ಯಾದಿಗಳ ಮೇಲೂ ಪೋಷಕ ಪರಿಣಾಮವಿರುವ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿದೆ. ಮರ್ಮಚಿಕಿತ್ಸೆಯು ದೇಹದ 108 ಪ್ರಮುಖ ಬಿಂದುಗಳನ್ನು ಅಧ್ಯಯನ ಮಾಡುವ ಮೂಲಕ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ.

ಪುನರುಜ್ಜೀವನದ ಅವಶ್ಯಕತೆ: ಕಲರಿ ಈಗ ತನ್ನ ಜನ್ಮಭೂಮಿಯಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದು, ಈಗ ಅದು ಪುನಃಜೀವಂತಗೊಳ್ಳಬೇಕಾದ ಸಮಯ ಬಂದಿದೆ. ಗರಡಿಗಳು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿದ್ದು, ಶ್ರೇಷ್ಠ ಯೋಧಕಲೆಯ ಜ್ಞಾನವೂ ಜನಜಾಗೃತಿಯಿಂದ ಮರೆಯಾಗುತ್ತಿದೆ. ಈ ಅತ್ಯಪೂರ್ವ ವಿದ್ಯೆಯನ್ನು ಮರು ಜೀವಗೊಳಿಸಿದರೆ 

ನಮ್ಮ ಯುವಜನತೆಗೆ ಶಿಸ್ತು, ದೇಶಭಕ್ತಿ ಹಾಗೂ ಉದ್ಯೋಗದ ದಾರಿ ಕಲರಿಯ ಮೂಲಕ ತೆರೆದುಕೊಳ್ಳಬಹುದು. ಸಮುದಾಯ ಆರೋಗ್ಯ, ಪರ್ಯಾಯ ಸ್ಥಳೀಯ ಚಿಕಿತ್ಸಾ ಪದ್ಧತಿ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ. 

ಈ ನಿಟ್ಟಿನಲ್ಲಿ ತುಳುವರ್ಲ್ಡ್ ಫೌಂಡೇಶನ್ ಈ ಕಲೆಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಆರ್ಕೈವ್ ಸಂಶೋಧನೆ, ಮೌಖಿಕ-ಲಿಖಿತ ದಾಖಲೆಗಳ ಸಂಗ್ರಹ, ತರಬೇತಿ ಶಿಬಿರಗಳು, ಕಲರಿ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ ಮುಂತಾದ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದೆ.


ಈ ಮಹತ್ಕಾರ್ಯಕ್ಕೆ ಸಕಲ ಕಲಾಪ್ರೇಮಿಗಳು, ಕ್ರೀಡಾಪಟುಗಳು, ಸಾಹಸ ಕಲಾವಿದರು, ಸಂಶೋಧಕರು ಹಾಗೂ ಯುವ ಸಮುದಾಯದವರನ್ನು ಈ ಮಹತ್ವದ ಚರ್ಚಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹಾರ್ದಿಕವಾಗಿ ಆಹ್ವಾನಿಸಲಾಗಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ನ ಪ್ರಧಾನ ಸಂಚಾಲಕರಾದ ಪ್ರಮೋದ್ ಸಪ್ರೆ ಅವರು ತಿಳಿಸಿದ್ದಾರೆ

Share on :

SUDDI

 

Copyright © 2011 Tuluworld - All Rights Reserved