Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ ಶ್ರೀ ಅನಂತರಾಮ ಬಂಗಾಡಿ ವಿಧಿವಶ


ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ ಶ್ರೀ ಅನಂತರಾಮ ಬಂಗಾಡಿ ಅಲ್ಪಕಾಲದ ಅಸೌಖ್ಯದಿಂದ ತಾರೀಕು ಮೇ  12 , 2019 ರ ಭಾನುವಾರ ಬೆಳಿಗ್ಗೆ  11.45 ಕ್ಕೆ ನಿಧನರಾದರು. ಅವರಿಗೆ 68 ವರ್ಷ ವಯಸಾಗಿತ್ತು.

ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಂಗ ಮನೆತನದ ಅರಸುಗಳ ಶ್ವೇತಛತ್ರ ಹಿಡಿಯುತ್ತಿದ್ದ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಯ ಎರಡನೇ ಮಗನಾಗಿದ್ದ ಅನಂತರಾಮ ಬಂಗಾಡಿಯವರು, ಅಪರೂಪದಲ್ಲಿ ಅಪರೂಪದ ವಿವಿಧ ವಿದ್ಯಾಪಾರಂಗತರಾಗಿದ್ದರು. ನೂರೈವತ್ತಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನಾಕಾರರು, ಜ್ಯೋತಿಷಿಗಳು, ಸಾಹಿತಿಗಳು, ಹರಿಕಥಾ ಪ್ರವಚನಕಾರರು, ನಾಟಕ ದಿಗ್ಧರ್ಶಕರು, ತೊಗಲು ಬೊಂಬೆಯಾಟ, ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡ್ದನ ಪರಿಣಿತರಾಗಿದ್ದರು.

1951ರ ನವೆಂಬರ್ 14ರಂದು ಜನಿಸಿದ ದಿವಂಗತರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಬಂಗಾಡಿಯಲ್ಲಿ ಪೂರೈಸಿ, ಹೈಸ್ಕೂಲು ವಿದ್ಯಾಭ್ಯಾಸವನ್ನು ಹಾಸನದ ಹೆತ್ತೂರಿನಲ್ಲಿ ಆರಂಭಿಸಿ ಅಲ್ಲಿಯೇ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ್ದರು.
ನಂತರ ಕವಿ ನೀಲಕಂಠ ಭಟ್ ಶಿರಾಲಿಪಾಲರ ಮಾರ್ಗದರ್ಶನದಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ತೇರ್ಗಡೆ ಹೊಂದಿ ಸೀಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ ಛಂದಸ್ಸನ್ನು ಅಧ್ಯಯನ ಮಾಡಿದ್ದರು.


ಕಾಡ ಮಲ್ಲಿಗೆ, ಕಚ್ಚೂರ ಮಾಲ್ದಿ, ಬೊಳ್ಳಿ ಗಿಂಡೆ, ಪಟ್ಟದ ಪದ್ಮಲೆ ಮುಂತಾದ ಯಶಸ್ವಿ ಪ್ರಸಂಗಗಳನ್ನೊಳಗೊಂಡು ನೂರೈವತ್ತಕ್ಕೂ ಹೆಚ್ಚು ತುಳು ಕನ್ನಡ ಭಾಷೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮಾತ್ರವಲ್ಲದೆ ರಾಜ್ಯಾದ್ಯಂತ ಸಾವಿರಾರು ಪ್ರದರ್ಶನ ಕಂಡ ಪ್ರಸಂಗಗಳು ಯಕ್ಷಗಾನ ಪ್ರಿಯರ ಮನತಣಿಸಿವೆ. ಯಕ್ಷಗಾನಾಕಾಂಕ್ಷಿಗಳ ನಿರಂತರ ಪ್ರೋತ್ಸಾಹದಿಂದ ಯಕ್ಷಗಾನ ಲೋಕದಲ್ಲಿ ಛಾಪು ಮೂಡಿಸಲು ಸಾಧ್ಯವಾಯಿತು. ಜಾತಿ ಮತಧರ್ಮದ ಎಲ್ಲೆಯನ್ನು ಮೀರಿ ಕ್ರೈಸ್ತ ಸಂತರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸಿದ್ದರು. ಸಮಾನಮನಸ್ಕ ಸ್ನೇಹಿತರೊಡಗೂಡಿ “ಸೌಹಾರ್ದ ಕಲಾವಿದರು ಯಕ್ಷರಂಗ ಬಂಗಾಡಿ” ಎಂಬ ತಂಡ ಕಟ್ಟಿ ಸುಮಾರು ಹದಿನೈದು ವರ್ಷಗಳ ಕಾಲ ಯಕ್ಷಗಾನ ಕಲೆಯ ಗಂಧವನ್ನು ನಾಡಿನಾದ್ಯಂತ  ಪಸರಿಸಲು ಶ್ರಮಿಸಿದ್ದರು.

ಜ್ಯೋತಿಷ್ಯ ಕ್ಷೇತ್ರದಲ್ಲಿ ತುಳು ಜ್ಯೋತಿಷ್ಯ ಗ್ರಂಥವನ್ನು ಮೊತ್ತಮೊದಲ ಬಾರಿಗೆ ಬರೆದವರು ಸಂಶೋಧಕ ಅನಂತರಾಮ ಬಂಗಾಡಿ.

ನಮ್ಮ ಸೌಹಾರ್ದ ಕಲಾವಿದರ ಯಕ್ಷರಂಗ ಬಂಗಾಡಿ ತಂಡದಿಂದ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಸಂದೇಶ ಸಾರಲು, ಪರಿಸರ ಜಾಗೃತಿ ಮೂಡಿಸಲು ಐವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದರು. ಫಿನ್ ಲ್ಯಾಂಡ್ ಮತ್ತು ಭಾರತದ ಜಾನಪದ ಅಧ್ಯಯನಕ್ಕಾಗಿ ಮತ್ತು ತುಳು ಶಬ್ದಕೋಶ ರಚನೆಗಾಗಿ ತುಳು ನಿಘಂಟು ಕಾರ್ಯಾಗಾರದಲ್ಲಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ಜ್ಯೋತಿಷ್ಯ ಸಂಸ್ಥೆಯಿಂದ “ಜ್ಯೋತಿಷ್ಯ ಜ್ಞಾನರತ್ನ“ ಪ್ರಶಸ್ತಿ, “ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ“, “ಕುಬೆಯೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ“, “ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ“, “ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ“, “ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ“, “ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ“, “ವಿಶ್ವ ತುಳು ಸಮ್ಮೇಳನ ಪ್ರಶಸ್ತಿ“, “ತುಳುನಾಡ ಸಿರಿ ಪ್ರಶಸ್ತಿ“, “ಸ್ಕಂದ ಪುರಸ್ಕಾರ” ಮತ್ತು ಇತ್ತೀಚಿಗೆ ದೊರೆತ “ಯಕ್ಷದೇವ ಪ್ರಶಸ್ತಿ“. ಜೊತೆಗೆ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿವೆ.

 ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಿಂದ 1991ರಲ್ಲಿ  ಬಿಡುಗಡೆಗೊಂಡ ಶ್ರೀ ನಾಗೇಶ್ವರ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿದ್ದರು.

ದಿವಂಗತರು ಪತ್ನಿ ಸುಮತಿ , ಮಗ ಸಂದೇಶ್ ಬಂಗಾಡಿ, ಮಗಳು ಸಂಧ್ಯಾ, ಅಳಿಯ ಹಿರೇಬೆಟ್ಟು ಕೇಶವ ಭಂಡಾರಿ ಮತ್ತು ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Share on :

SUDDI

 

Copyright © 2011 Tulu World - All Rights Reserved